ಚಾಮರಾಜನಗರ :ಹೊರ ದೇಶಗಳಿಗೆ ತೆರಳಿದ ವೇಳೆ ತಾನು ಬುದ್ಧನ ನಾಡಿನಿಂದ ಬಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಭಾರತಕ್ಕೆ ಹಿಂದಿರುಗಿದಾಗ ಬುದ್ಧನನ್ನು ಮರೆಯುತ್ತಾರೆ. ಇದು ಇಬ್ಬಗೆಯ ನೀತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಕಿಡಿಕಾರಿದರು.
ಯಳಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ವರ್ಷದಿಂದ ಪ್ರಾಚೀನ ಧರ್ಮಗಳಾದ ಬೌದ್ಧ ಹಾಗೂ ಜೈನ ಧರ್ಮದ ಅಧ್ಯಾಯವನ್ನು ಆರನೇ ತರಗತಿ ಪಠ್ಯಪುಸ್ತಕದಿಂದ ಕೈ ಬಿಟ್ಟಿರುವುದು ಖಂಡನೀಯ ಹಾಗೂ ವಿಷಾದನೀಯ.
ಭಾರತದಲ್ಲಿ ಹಲವು ಧರ್ಮ, ವಿವಿಧ ಭಾಷಿಕರು ಕೂಡಿ ಬಾಳುತ್ತಿದ್ದಾರೆ. ಆದರೆ, ಅದನ್ನು ಬಿಜೆಪಿಯವರು ಮರೆಯುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಎರಡೂ ಧರ್ಮಗಳ ಅಧ್ಯಾಯವನ್ನು ಪಠ್ಯದಿಂದ ತೆಗೆಯಲಾಗಿದೆ ಎಂದು ಆರೋಪಿಸಿದರು.
ವಿಶ್ವಸಂಸ್ಥೆಯ 74ನೇ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆ ಕುರಿತು ಮಾತನಾಡುವ ಸಂದರ್ಭದಲ್ಲಿ ಭಾರತ ಜಗತ್ತಿಗೆ ಬುದ್ಧನನ್ನು ಕೊಟ್ಟಿದೆ. ಯುದ್ಧವನ್ನಲ್ಲ ಎಂದು ಹೇಳಿದ್ದರು.