ಮೈಸೂರು:ಕೇರಳದಿಂದ ಪಾದಯಾತ್ರೆ ಮುಗಿಸಿ ಕರ್ನಾಟಕಕ್ಕೆ ರಾಹುಲ್ ಗಾಂಧಿ ಅವರು ಬರುತ್ತಿದ್ದು, ಅವರ ಜೊತೆ ಪಕ್ಷಾತೀತವಾಗಿ ಮತ್ತು ಎಲ್ಲ ಸಂಘಟನೆಗಳು ಹೆಜ್ಜೆ ಹಾಕಬೇಕು. ಆ ನಡಿಗೆ ದೇಶಕ್ಕೊಂದು ಕೊಡುಗೆ ಆಗಲಿದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇರಳ ಭಾಗದಲ್ಲಿ ಉತ್ತಮ ಬೆಂಬಲ ಪಡೆದುಕೊಂಡು ಕರ್ನಾಟಕದ ಕಡೆ ಬರುತ್ತಿದೆ. ಅದರ ಪೂರ್ವ ತಯಾರಿಗೆ ಸಂಬಂಧಿಸಿದಂತೆ ಮೈಸೂರಿಗೆ ಭೇಟಿ ನೀಡಿದ್ದೇವೆ ಎಂದರು.
ಭಾರತ್ ಜೋಡೋ ಯಾತ್ರೆಯ ಮೊದಲ ದಿನದಿಂದಲೇ ನಾನು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ ಹರಿಪ್ರಸಾದ್ ಜತೆಗಿದ್ದೇವೆ. ಗುಂಡ್ಲುಪೇಟೆಯಿಂದ ಆರಂಭವಾಗುವ ಯಾತ್ರೆ ಮೈಸೂರು, ಮಂಡ್ಯ, ನಾಗಮಂಗಲ ಮೂಲಕ ಬಳ್ಳಾರಿ ತಲುಪಲಿದೆ ಎಂದು ಹೇಳಿದರು.
ಕೇರಳ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಗೆ ಅತಿದೊಡ್ಡ ಯಶಸ್ಸು ಸಿಕ್ಕಿದೆ. ಈ ದೇಶವು ಕಾಂಗ್ರೆಸ್ ಶ್ರಮವನ್ನು ಮೆಚ್ಚಿದೆ. ಯುವಕರು, ಸಾರ್ವಜನಿಕರು, ನೊಂದ ಜನರು ರಾಹುಲ್ ಗಾಂಧಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯಾತ್ರೆಯನ್ನು ಕರ್ನಾಟಕದಲ್ಲಿ ಯಶಸ್ವಿ ಮಾಡಲು ಪಕ್ಷಾತೀತವಾಗಿ ಮತ್ತು ಎಲ್ಲ ಸಂಘಟನೆಗಳು ಎಲ್ಲರೂ ಭಾಗಿಯಾಗಬೇಕು. ಒಗ್ಗಟ್ಟಿನ ನಡಿಗೆ ದೇಶಕ್ಕೊಂದು ಕೊಡುಗೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಮೈಸೂರು ಸಿಟಿ ಪಾದಯಾತ್ರೆ:ಮೈಸೂರು ಸಿಟಿ ಪಾದಯಾತ್ರೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಬೆಳಗ್ಗೆ 6.30 ಗಂಟೆಗೆ ಮೈಸೂರಿನ ಅರಮನೆ ಮುಂಭಾಗದಿಂದ ಪಾದಯಾತ್ರೆ ಮಾಡಲಿದ್ದಾರೆ. ಮೈಸೂರಿನ ಜನರು ಪ್ರತಿದಿನ ಬೆಳಗ್ಗೆ ವಾಕ್ ಹೋಗುವ ಅಭ್ಯಾಸ ಹೊಂದಿದ್ದು, ಅಂದು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಬೇಕು.
ರಾಹುಲ್ ಗಾಂಧಿ ಜೊತೆ ಪಾದಯಾತ್ರೆ ಮಾಡಲು ಇಂತಹ ಉತ್ತಮ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಬರುವ ದಿನವಾಗಿದೆ. ಎಲ್ಲರೂ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು.