ಕೊಳ್ಳೇಗಾಲ: ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ಗುಂಡೇಗಾಲ ಹಳೇ ಬಸ್ ಸ್ಟ್ಯಾಂಡ್ ಬಳಿ ಸಾರಿಗೆ ಬಸ್ ತಡೆದು ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.
ತಾಲೂಕಿನ ಉಗನೀಯ - ಪಾಳ್ಯದಿಂದ ಕೊಳ್ಳೇಗಾಲ ಪಟ್ಟಣಕ್ಕೆ ಬೆಳಗ್ಗಿನ ವೇಳೆ ಬರಬೇಕಾದ ಬಸ್ಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ಶಾಲಾ - ಕಾಲೇಜಿಗೆ ತೆರಳುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಬಸ್ ತಡೆದಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ: ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ 2 ಬಸ್ಗಳನ್ನು ಮಾತ್ರ ನಿಯೋಜಿಸಿರುವ ಬಗ್ಗೆ ಆಕ್ರೋಶ:
1 ವರ್ಷದ ಹಿಂದೆ ನಮ್ಮೂರಿನ ಕಡೆಗೆ 3 ಬಸ್ಗಳನ್ನು ನಿಯೋಜಿಸಲಾಗಿತ್ತು. ಬೆಳಗ್ಗೆ 8:15 ಒಂದು ಬಸ್, 8:45ಕ್ಕೆ ಹಾಗೂ 9:30ಕ್ಕೆ ಒಂದು ಬಸ್ ಬರುತ್ತಿತ್ತು. ಆದರೀಗ ಒಂದು ಬಸ್ ಬರುತ್ತಿಲ್ಲ, ಕೇವಲ 2 ಬಸ್ಗಳ ಸೇವೆ ಮಾತ್ರ ಇದೆ. ಅದೂ ಕೂಡ ಸರಿಯಾಗಿ ಸಮಯಕ್ಕೆ ಬಾರದೇ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರಳಲು ಹರಸಹಾಸ ಪಡುತ್ತಿದ್ದಾರೆ. ಸದ್ಯ 8:15 ಕ್ಕೆ ಒಂದು ಬಸ್ ಬಂದರೆ, 9.30ಕ್ಕೆ ಮತ್ತೊಂದು ಬಸ್ ಬರುತ್ತದೆ. 2 ಬಸ್ಗಳು ಸಾಲದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಶಾಲಾ- ಕಾಲೇಜಿಗೆ ತೆರಳಲು ತೊಡಕು:
ಉಗನೀಯ - ಪಾಳ್ಯ ಮಾರ್ಗದಲ್ಲಿ ಗುಂಡೇಗಾಲ, ಜಿನಕನಹಳ್ಳಿ, ನರೀಪುರ ಗ್ರಾಮಗಳು ಸಿಗುತ್ತವೆ. ಇಲ್ಲಿಂದ ನೂರಾರು ವಿದ್ಯಾರ್ಥಿಗಳು ನಿತ್ಯ ಪಟ್ಟಣಕ್ಕೆ ಬರುತ್ತಾರೆ. 5 ಗ್ರಾಮಗಳಿಂದ ಬರುವ ನೂರಾರು ವಿದ್ಯಾರ್ಥಿಗಳಿಗೆ ಎರಡು ಬಸ್ ಸೇವೆ ಸೇವೆ ಸಾಕಾಗುವುದಿಲ್ಲ. ನೂಕುನುಗ್ಗಲಿನಲ್ಲಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಚರಿಸಬೇಕಿದೆ. ಪರಿಣಾಮ ಸಮರ್ಪಕವಾಗಿ ತರಗತಿಗಳಿಗೆ ಹೋಗದೇ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯ ಸುನೀಲ್ ತಿಳಿಸಿದ್ದಾರೆ.
ಮಾಸಿಕ ಪಾಸ್ ವ್ಯರ್ಥ:
ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯಿಂದ ನೀಡುವ ಮಾಸಿಕ ಪಾಸ್ಗಳನ್ನು ಬಳಸಿ ಶಾಲಾ - ಕಾಲೇಜಿಗೆ ತೆರಳುತ್ತಾರೆ. ಆದರೆ, ಬಸ್ ಅಭಾವ ಇರುವುದರಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತೆರಳಲು ಸಾಧ್ಯವಾಗದೇ ಖಾಸಗಿ ವಾಹನಗಳನ್ನು ಹಿಡಿದು ಹಣ ಕೊಟ್ಟು ತೆರಳಬೇಕಾಗಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಹೇಳಿಕೆ ದಾಖಲಿಸಿಕೊಂಡ ಎಸ್ಐಟಿ
ಇನ್ನೂ ಮುಂದಾದರು ಪ್ರಯೋಜನಕ್ಕೆ ಬೇಕಾದ ಬಸ್ ನಿಯೋಜನೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ. ಇಲ್ಲಿನ ಡಿಪೋ ಮ್ಯಾನೇಜರ್ಗೆ ಕರೆ ಮಾಡಿದ ಗ್ರಾಮಸ್ಥರು, ದೂರು ನೀಡಿ ತರಾಟೆಗೆ ತೆಗೆದುಕೊಂಡಿದ್ದು, ಸಮಸ್ಯೆ ಬಗೆಹರಿಸುವುದಾಗಿ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ.