ಕೊಳ್ಳೇಗಾಲ: ವಿಧಾನಸಭೆ ಅಧಿವೇಶನ ಮುಗಿಸಿ ಬರುವಷ್ಟರಲ್ಲಿ ನನ್ನ ಕ್ಷೇತ್ರದ ನರೀಪುರ ಗ್ರಾಮದ ರಸ್ತೆ ಕಾಮಗಾರಿ ಪ್ರಾರಂಭಿಸದೆ ಹೋದರೆ ಉಗ್ರ ಹೋರಾಟ ಮಾಡುತ್ತೇನೆ ಎಂದು ಶಾಸಕ ನರೇಂದ್ರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಮಿಶ್ರ ಸರ್ಕಾರದ ಅವಧಿಯಲ್ಲಿ ಎಸ್.ಎಸ್.ಡಿ.ಪಿ ಯೋಜನೆಯಡಿ ತಾಲೂಕಿನ ನರೀಪುರ ಗ್ರಾಮದಿಂದ - ಪಾಳ್ಯ ಗ್ರಾಮದವರೆಗೆ, ಪಟ್ಟಣದ ಆರ್. ಸಿ.ಎಂ ಶಾಲೆಯಿಂದ ಮಧುವನಹಳ್ಳಿ ವರೆಗೆ, ರಾಮಾಪುರ ಗ್ರಾಮದಿಂದ ಗರಿಕೆ ಕಂಡಿಯ ವರೆಗಿನ ವಿವಿಧ ರಸ್ತೆ ಕಾಮಗಾರಿಗಳಿಗೆ 15 ಕೋಟಿ ಅನುದಾನ ತಂದಿದೆ. ಅದರಂತೆ ಕಾಮಗಾರಿಗಳಿಗೆ ಸಹ ಭೂಮಿ ಪೂಜೆ ನೆರವೇರಿಸಿದ್ದೆ. ಕಾನೂನಾತ್ಮಕವಾಗಿ ಗುತ್ತಿಗೆದಾರರು ಟೆಂಡರ್ ಪಡೆದು ಮೂರು ವರ್ಷ ಅವಧಿಗೆ 97.83 ಲಕ್ಷ ನಿರ್ವಹಣಾ ವೆಚ್ಚವನ್ನು ತೆತ್ತಿದ್ದರು.
ರಸ್ತೆ ಕಾಮಗಾರಿ ಪ್ರಾರಂಭವಾಗದಿದ್ದರೆ ಉಗ್ರ ಹೋರಾಟ ಮಾಡುತ್ತೇನೆ : ಶಾಸಕ ನರೇಂದ್ರ ಇಷ್ಟದರೂ ಒಂದು ವರ್ಷದಿಂದ ರಸ್ತೆ ಕಾಮಗಾರಿಗೆ ಸಿ.ಎಂ ಕಚೇರಿಯಿಂದ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಿಲ್ಲ. ಈ ಕಾರಣ ನೆನೆಗುದ್ದಿಗೆ ಬಿದ್ದ ರಸ್ತೆಗೆ ಬೇಸತ್ತ ಕ್ಷೇತ್ರದ ಜನರು ನನ್ನ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಷ್ಟಪಟ್ಟು ಅನುದಾನ ತಂದರೂ ಪ್ರಯೋಜನವಿಲ್ಲವಾಗಿರುವುದು ನಿಜಕ್ಕೂ ನನ್ನ ದೌರ್ಭಾಗ್ಯ ಎಂದರು.
10 ತಿಂಗಳಾದರೂ ಇನ್ನೂ ಕಾಮಗಾರಿ ಆರಂಭವಾಗದ ಕಾರಣ ಹಲವು ಬಾರಿ ಪಿಡಬ್ಲ್ಯೂ ರಾಜ್ಯ ಮುಖ್ಯ ಯೋಜನಾಧಿಕಾರಿ ಮೃತ್ಯುಂಜಯ ಸೇರಿದಂತೆ ಸಂಬಂಧಪಟ್ಟ ಮುಖ್ಯ ಅಧಿಕಾರಿಗಳಿಗೆ ರಸ್ತೆ ಕಾಮಗಾರಿ ಪ್ರಾರಂಭಿಸಿ ಎಂದು ಸೂಚನೆ ನೀಡಿದ್ದೇನೆ. ಈ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು ಕಾಮಗಾರಿ ಪಡೆದ ಗುತ್ತಿಗೆದಾರರನ್ನು ಸಿ.ಎಂ ಕಚೇರಿಗೆ ಕಳುಹಿಸಿ ಕೊಡಿ ಎಂದು ಹೇಳುತ್ತಿದ್ದಾರೆ. ಕಾನೂನಾತ್ಮಕವಾಗಿ ಕಾಮಗಾರಿ ಪಡೆವ ಎಲ್ಲಾ ಪ್ರಕ್ರಿಯೆ ಮುಗಿದಿದ್ದರೂ ಪುನಃ ಸಿ.ಎಂ ಕಚೇರಿಗೆ ಭೇಟಿ ನೀಡುವಂತೆ ಒತ್ತಾಯ ಮಾಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗಭೀರವಾಗಿ ಆರೋಪಿಸಿದರು.
ನೆನೆಗುದ್ದಿಗೆ ಬಿದ್ದಿರುವ ಕಾಮಗಾರಿಯಿಂದ ಕ್ಷೇತ್ರದ ಜನರು ಬೇಸತ್ತಿದ್ದು ಕೆಲವು ತಿಂಗಳ ಹಿಂದೆ ರಸ್ತೆಯಲ್ಲಿ ನಿಂತು ಪ್ರತಿಭಟಿಸಿದ್ದರು. ರಸ್ತೆ ಕಾಮಗಾರಿ ವಿಳಂಬದ ಕಾರಣಕ್ಕೆ ನನ್ನ ಮೇಲೆ ಜನರಲ್ಲಿ ತಪ್ಪುಕಲ್ಪನೆ ಮೂಡಿದೆ ಎಂದು ತಿಳಿದು ಬಂದಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದರು ಕಾಮಗಾರಿ ನಿಂತಿರುವುದು ನನಗೆ ನೋವುಂಟು ಮಾಡಿದೆ.
ನಾಳೆ ಕೂಡ ರೈತ ಸಂಘದ ವತಿಯಿಂದ ಕಾಮಗಾರಿ ವಿಳಂಬದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂಬುದು ತಿಳಿದಿದ್ದು. ಈ ಹೋರಾಟಕ್ಕೆ ನನ್ನ ಬೆಂಬಲವಿದೆ. ಸೆ.21 ರ ಅಧಿವೇಶನ ಭಾಗವಹಿಸುವ ಸಂಬಂಧ ಕೊರೊನಾ ಟೆಸ್ಟ್ ಮಾಡಿಸಿರುವುದರಿಂದ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅಧಿವೇಶನ ಮುಗಿಯುವಷ್ಟರಲ್ಲಿ ಕಾಮಗಾರಿ ಪ್ರಾರಂಭವಾಗದಿದ್ದರೆ ಪಕ್ಷತೀತವಾಗಿ ನನ್ನ ನೇತೃತ್ವದಲ್ಲಿಯೇ ವಿವಿಧ ಸಂಘ ಸಂಸ್ಥೆ ಜೊತೆಗೂಡಿ ಉಗ್ರ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಸಿದರು.