ಚಾಮರಾಜನಗರ: ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿ ಮಗುವೊಂದು ದಾರುಣವಾಗಿ ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಂಗಸ್ವಾಮಿ ಮತ್ತು ಲಕ್ಷ್ಮಿ ದಂಪತಿಯ ಪುತ್ರ ಗಗನ್(11 ತಿಂಗಳು) ಮೃತ ಮಗು ಎಂದು ತಿಳಿದುಬಂದಿದೆ. ಮಗು ಗಗನ್ ಗೆ ಸ್ನಾನ ಮಾಡಿಸಿ ಮಲಗಿಸಿದ್ದ ವೇಳೆ ಅಲ್ಲೇ ಪಕ್ಕದಲ್ಲೇ ಇದ್ದ ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದ್ದು, ಮಗುವಿಗೆ ವಿದ್ಯುತ್ ಶಾಕ್ ಹೊಡೆದಿದೆ.
ಇದನ್ನು ಕಂಡ ಮಗುವಿನ ಚಿಕ್ಕಮ್ಮ ಮಗುವನ್ನು ಬಿಡಿಸಲು ಪ್ರಯತ್ನಿಸಿದಾಗ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ. ಇಬ್ಬರನ್ನು ತಕ್ಷಣ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.