ಚಾಮರಾಜನಗರ: ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಬೆಳಗ್ಗೆಯಿಂದ ಪ್ರತಿಭಟನೆ ಜೋರಾಗಿದ್ದು ಸಾರಿಗೆ ಬಸ್ಗಳು ರಸ್ತೆಗಿಳಿದಿಲ್ಲ. ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ತೆರಳಲು ಬಸ್ಗಳಿಲ್ಲದೇ ವಿದ್ಯಾರ್ಥಿಗಳು ಪರದಾಡಿದರು. ಬಂದ್ ಇದ್ದರೂ ಕೂಡ ರಜೆ ನೀಡದಿದ್ದರಿಂದ ಎರಡು ತಾಸಿಗೂ ಅಧಿಕ ಕಾಲ ಬಸ್ಗಾಗಿ ಕಾದು ಬಳಿಕ ಆ್ಯಂಬುಲೆನ್ಸ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಕಾಲೇಜಿಗೆ ತೆರಳಿದರು.
ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಇಂದು ಬೆಳಗ್ಗೆ 6 ರಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭುವನೇಶ್ವರಿ ವೃತ್ತದಲ್ಲಿ ಕಬ್ಬು ಬೆಳೆಗಾರರ ಸಂಘ, ಕನ್ನಡಪರ ಸಂಘಟನೆಗಳು ರಸ್ತೆ ತಡೆ ನಡೆಸಿ ತಮಿಳುನಾಡು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಟೆ ಬಾರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ನಂತರ, ರಸ್ತೆ ಮಧ್ಯದಲ್ಲಿ ಅರೆಬೆತ್ತಲೆಯಾಗಿ ಉರುಳುಸೇವೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕರ್ನಾಟಕ ಬಂದ್ ಎಂದು ತಮಟೆ ಬಾರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದಾರೆ. ಬಳಿಕ ಭುವನೇಶ್ವರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತ, ಅಂಗಡಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಗುಂಡ್ಲುಪೇಟೆ ವೃತ್ತದಲ್ಲಿ ಎಂಪಿಗಳು, ಶಾಸಕರು, ಸಚಿವರ ವಿರುದ್ಧ ಧಿಕ್ಕಾರ ಕೂಗಿ ನೃತ್ಯ ಮಾಡಿದರು. ಸಂತೇಮರಹಳ್ಳಿ ವೃತ್ತದಲ್ಲಿ ಕಿವಿ ಮೇಲೆ ಗುಲಾಬಿ ಹೂಗಳನ್ನು ಇಟ್ಟುಕೊಂಡು ರೈತರ ಕಿವಿ ಮೇಲೆ ಹೂವಿಡುವ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.
ಭುವನೇಶ್ವರಿ ವೃತ್ತದಲ್ಲಿ ತಮಗೆ ಕುಡಿಯಲು ನೀರಿಲ್ಲ ತಮಿಳುನಾಡು ಬೆಳೆಗೆ ನೀರು ಹರಿಸಲಾಗುತ್ತಿದೆ ಎಂದು ಬಿಸ್ಲೆರಿ ನೀರನ್ನು ಕುಡಿದು ಸರ್ಕಾರದ ವಿರುದ್ಧ ಕಿಡಿಕಾರಿದರು. ರೈತರಿಗೆ ಸರ್ಕಾರ ಬೆತ್ತದ ಏಟು ಕೊಡುತ್ತಿದೆ ಎಂಬುದರ ಸೂಚಕವಾಗಿ ಬೆತ್ತದ ಮೂಲಕ ಸಾಂಕೇತಿಕ ರೀತಿಯಲ್ಲಿ ಹೊಡೆಯುವ ರೀತಿ ಸರ್ಕಾರಗಳ ವಿರುದ್ದ ಆಕ್ರೋಶ ಹೊರಹಾಕಿದರು. ಬೆಳಗ್ಗೆ 6 ರಿಂದಲೇ ಚಾಮರಾಜನಗರದಲ್ಲಿ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ಗಳು, ಆಟೋಗಳು, ಲಾರಿಗಳು ರಸ್ತೆಗಿಳಿದಿಲ್ಲ, ಬಹುತೇಕ ಎಲ್ಲಾ ಅಂಗಡಿಗಳು ಕೂಡ ಮುಚ್ಚಿದ್ದು ಹಾಲಿನ ಕೇಂದ್ರಗಳು ಮಾತ್ರ ತೆರೆದಿವೆ.