ಚಾಮರಾಜನಗರ:ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ದಿಂಬಂ ಘಾಟಿಯಲ್ಲಿ ರಾತ್ರಿ ಸಂಚಾರ ನಿರ್ಬಂಧ ವಿರೋಧಿಸಿ ತಮಿಳುನಾಡು ಮತ್ತು ಕರ್ನಾಟಕ ರೈತರು ಪ್ರತ್ಯೇಕ ಪ್ರತಿಭಟನೆ ನಡೆಸಿದ್ದು, ತಮಿಳುನಾಡಿನ ತಾಳವಾಡಿ ತಾಲೂಕು ಕೇಂದ್ರ ಇಂದು ಅಘೋಷಿತ ಬಂದ್ ಆಗಿದೆ.
ತಮಿಳುನಾಡು- ಕರ್ನಾಟಕ ಗಡಿಯಾದ ಪುಣಜನೂರುನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಸಂಚಾರ ನಿರ್ಬಂಧದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ರೈತರು ರಸ್ತೆ ತಡೆದಿದ್ದರಿಂದ ಅರ್ಧ ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಂ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ರೈತರನ್ನು ಚಾಮರಾಜನಗರ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಹೊನ್ನೂರು ಪ್ರಕಾಶ್ ಮಾತನಾಡಿ, ರಾತ್ರಿ ಸಂಚಾರ ನಿರ್ಬಂಧ ಹೇರುವ ಮುನ್ನ ರೈತರ ಅಭಿಪ್ರಾಯವನ್ನು ಮದ್ರಾಸ್ ಹೈಕೋರ್ಟ್ ಪಡೆಯಬೇಕಿತ್ತು. ಹಣ್ಣು - ತರಕಾರಿ ಕೊಯ್ದು ಗಡಿಗೇ ಬರಲು ಸಂಜೆ 6 ಗಂಟೆಯಾಗುತ್ತದೆ. ಬೆಳಗ್ಗೆ 6ಕ್ಕೆ ಗಡಿ ತೆರೆಯುವುದರಿಂದ 12 ತಾಸು ತಡವಾಗುತ್ತದೆ. ಇದರಿಂದ ತರಕಾರಿ ತನ್ನ ಗುಣಮಟ್ಟ ಕಳೆದುಕೊಳ್ಳಲಿದ್ದು, ಅಲ್ಲಿನ ಮಾರುಕಟ್ಟೆ ತಲುಪಿ ವಹಿವಾಟು ನಡೆಸಬೇಕಾದರೇ ಒಂದು ದಿನ ಹೆಚ್ಚುವರಿಯಾಗುತ್ತದೆ. ರೈತರು ಹಾಗೂ ಕೃಷಿ ಚಟುವಟಿಕೆಯನ್ನೇ ನಂಬಿರುವವರು ಇದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದರು.