ಚಾಮರಾಜನಗರ: ಕರ್ನಾಟಕದ ಗಡಿಯಲ್ಲಿರುವ ಪುಣ್ಯಕ್ಷೇತ್ರ ಕೊಂಗಳ್ಳಿ ಬೆಟ್ಟದಲ್ಲಿ ತಮಿಳುನಾಡು ಅರಣ್ಯ ಇಲಾಖೆಯು ಅಳವಡಿಸಿರುವ ಚೆಕ್ ಪೋಸ್ಟ್ ವಿರುದ್ಧ ಸಾವಿರಾರು ಮಂದಿ ಭಕ್ತರು ಆಕ್ರೋಶ ವ್ಯಕ್ತಪಡಿಸಿ, ಚೆಕ್ ಪೋಸ್ಟ್ ತೆಗೆಯುವಂತೆ ಒತ್ತಾಯಿಸಿದರು.
ಚೆಕ್ ಪೋಸ್ಟ್ ವಿಷಯದಲ್ಲೂ ತಮಿಳುನಾಡು ಕಿರಿಕ್... ಕನ್ನಡಿಗರಿಗೆ ಯಾಕಿಂತ ಅನ್ಯಾಯ? - kannadanews
ಚಾಮರಾಜನಗರ ಜಿಲ್ಲೆಯ ಕೊಂಗಳ್ಳಿ ಬೆಟ್ಟದಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ನಲ್ಲಿ ನಡೆಯುತ್ತಿದ್ದ ಹಣ ವಸೂಲಿ ವಿರುದ್ಧ ಕನ್ನಡಿಗ ಭಕ್ತರು ತಿರುಗಿಬಿದ್ದಿದ್ದಾರೆ.
ಸತ್ಯಮಂಗಲಂ ಅರಣ್ಯ ಪ್ರದೇಶಕ್ಕೆ ಒಳಪಡುವ ಕೊಂಗಳ್ಳಿ ಬೆಟ್ಟವು ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿದ್ದು, ಪ್ರತಿ ಅಮಾವಾಸ್ಯೆಯಂದು ನಡೆಯುವ ವಿಶೇಷ ಪೂಜೆಗೆ ಕನ್ನಡಿಗ ಭಕ್ತರೇ ಹೆಚ್ಚು ಭೇಟಿ ನೀಡುತ್ತಾರೆ. ಕಳೆದ 7-8 ತಿಂಗಳುಗಳ ಹಿಂದೆ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಅಳವಡಿಸಿ ಭಕ್ತಾದಿಗಳಿಂದ ತೆರಿಗೆ ಹಣವನ್ನು ಪಡೆಯುತ್ತಿದ್ದರು. ಆರಂಭದಿಂದಲೂ ತೀವ್ರವಾಗಿ ವಿರೋಧಿಸಿದ್ದ ಭಕ್ತಾದಿಗಳು ಇಂದು ಸಾವಿರಾರು ಮಂದಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ. ಅಮಾವಾಸ್ಯೆಯ ವಿಶೇಷ ಪೂಜೆಗೆ ಚಾಮರಾಜನಗರ, ಗುಂಡ್ಲುಪೇಟೆ ಭಾಗದಿಂದ ತೆರಳಿದ್ದ ಸಾವಿರಾರು ಮಂದಿ ಭಕ್ತರು ಯಾವುದೇ ಕಾರಣಕ್ಕೂ ತೆರಿಗೆಯನ್ನು ಪಡೆಯಬಾರದು ಎಂದು ಬಿಗಿಪಟ್ಟು ಹಿಡಿದಿದ್ದು ಸತ್ಯಮಂಗಲಂ ಅರಣ್ಯಾಧಿಕಾರಿಗಳೊಂದಿಗೆ ಪ್ರತಿಭಟನಾಕಾರರು ಮಾತಿನ ಚಕಮಕಿಯನ್ನೂ ನಡೆಸಿದ್ದಾರೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಹಬದಿಗೆ ಬಂತು.
ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ಚಾಮರಾಜನಗರ ಭಾಗದ ರೈತರ ಆರಾಧ್ಯ ದೈವವಾಗಿದ್ದು ಜಾನುವಾರುಗಳನ್ನು ರೋಗ-ರುಜಿನದಿಂದ ಕಾಪಾಡುತ್ತಾನೆ ಎಂಬ ಬಲವಾದ ನಂಬಿಕೆ ಇದೆ. ಇನ್ನು, ಈ ದೇಗುಲಕ್ಕೆ ಮಹಿಳೆಯರು ಬಂದರೆ ಕಲ್ಲಾಗುತ್ತಾರೆ ಎಂಬ ನಂಬಿಕೆಯೂ ಬೇರೂರಿವುದರಿಂದ ಸ್ತ್ರೀಯರು ದೇಗುಲಕ್ಕೆ ಭೇಟಿ ನೀಡುವುದಿಲ್ಲ.