ಚಾಮರಾಜನಗರ:ಜಿಲ್ಲೆಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಧ್ವಜಾರೋಹಣ ನೆರವೇರಿಸಿದರು.
ಕನ್ನಡ ರಾಜ್ಯೋತ್ಸವ: ಹಾರಾಡದ ಕನ್ನಡ ಬಾವುಟ, ಹಿಂದಿ ಹೇರಿಕೆ ವಿರುದ್ಧ ಜಾಥಾ ಈ ವೇಳೆ ಪೊಲೀಸ್ ಪಡೆ, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ದಳ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ಪಥ ಸಂಚಲನದ ಮೂಲಕ ಗೌರವ ವಂದನೆ ಸಲ್ಲಿಸಿದರು.
ಇನ್ನು ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ಕುಮಾರ್, ಸಂಸದ ವಿ. ಶ್ರೀನಿವಾಸಪ್ರಸಾದ್ ಗೈರಾಗಿದ್ದರು. ಕಳೆದ ಸ್ವಾತಂತ್ರ್ಯ ದಿನಾಚರಣೆಯಂದೂ ಕೂಡ ಸಂಸದರು ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಹಾರಾಡದ ನಾಡ ಬಾವುಟ:
ಸರ್ಕಾರದ ನಿಯಮದಂತೆ ಶಾಲಾ ಕಾಲೇಜುಗಳಲ್ಲಿ ನಾಡಧ್ವಜಾರೋಹಣ ಮಾಡದೇ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ರಾಜ್ಯೋತ್ಸವ ಆಚರಿಸಲಾಯಿತು. ಆದರೆ, ಗಡಿಭಾಗದ ಗೋಪಿನಾಥಂ ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ, ಸಾರಿಗೆ ಇಲಾಖೆಗಳಲ್ಲಿ ಕನ್ನಡ ಡಿಂಡಿಮದ ಸದ್ದು ಜೋರಾಗಿತ್ತು.
ಹಿಂದಿ ಹೇರಿಕೆ ವಿರುದ್ಧ ಜಾಥಾ:
ಬಿವಿಎಸ್, ಪ್ರಗತಿಪರ ಸಂಘಟನೆಗಳು ನಗರದಲ್ಲಿ ಹಿಂದಿ ಹೇರಿಕೆ ವಿರುದ್ಧ ಜಾಥಾ ನಡೆಸಿ ಕರಪತ್ರಗಳನ್ನು ಹಂಚಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದಂತೆ ಹಿಂದಿ ಭಾಷೆಗೆ ನೀಡಿರುವ 344, 351 ವಿಧಿಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು.
ಕೊಳ್ಳೇಗಾಲ, ಗುಂಡ್ಲುಪೇಟೆ ತಾಲೂಕು ಕೇಂದ್ರಗಳಲ್ಲಿ ರಾಜ್ಯೋತ್ಸವ ಆಚರಿಸಿ ರಾಷ್ಟ್ರ ಧ್ವಜ ಮತ್ತು ನಾಡ ಬಾವುಟ ಎರಡನ್ನೂ ಹಾರಿಸಲಾಯಿತು.