ಚಾಮರಾಜನಗರ:ಖಾವಿ ಧರಿಸಿದರೂ ಕಾಯಕ ಬಿಡದ ಸ್ವಾಮೀಜಿ ಮಠದ ಕೊಡುಗೆ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದು ಲಕ್ಷಾಂತರ ಆದಾಯ ಗಳಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಕಬ್ಬಿಣ ಕೋಲೇಶ್ವರ ಮಠದ ಇಮ್ಮಡಿ ಗುರುಮಲ್ಲ ಸ್ವಾಮೀಜಿ 'ಕಾಯಕವೇ ಕೈಲಾಸ' ಎಂಬ ಮಾತಿನ ಮಹತ್ವವನ್ನು ಲೋಕಕ್ಕೆ ಸಾರುತ್ತಿದ್ದಾರೆ. ಮಠಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ನೀಡಿರುವ 20 ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದು 135 ಕ್ವಿಂಟಲ್ ಇಳುವರಿ ಪಡೆದಿದ್ದಾರೆ.
ಈ ಕುರಿತು ಶ್ರೀಗಳು, ಈಟಿವಿ ಭಾರತದೊಂದಿಗೆ ಮಾತನಾಡುತ್ತಾ, 'ಈಗ ನನಗೆ 35 ವರ್ಷ ವಯಸ್ಸಾಗಿದ್ದು 16ನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದೆ. ಗೋಪಾಲಪುರದ ಮಠಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಈ ಹಿಂದೆ ಮಠದ ಜಮೀನನ್ನು ಗುತ್ತಿಗೆ ನೀಡಲಾಗುತ್ತಿತ್ತು. ಆದರೆ ನಾವೇ ಏಕೆ ಕೃಷಿ ಮಾಡಬಾರದೆಂದು ಈ ಬಾರಿ ಕೃಷಿ ಮಾಡಿದೆ. ಒಂದು ತಿಂಗಳು ಮಳೆ ಕೈಕೊಟ್ಟರೂ ಉತ್ತಮ ಫಸಲು ಬಂದಿದೆ' ಎಂದು ಸಂತಸ ಹಂಚಿಕೊಂಡರು.