ಚಾಮರಾಜನಗರ: ಮಳೆ ಹೆಚ್ಚಾದಂತೆ, ಕಾವೇರಿ ನೀರಿನ ಮಟ್ಟ ಹೆಚ್ಚಾದಂತೆಲ್ಲಾ ಕೊಳ್ಳೇಗಾಲ ತಾಲೂಕಿನ 8ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಆವರಿಸುತ್ತದೆ.ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದ್ದು, ಕಾವೇರಿ ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಿದೆ.
ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಎಡಕುರಿಯ, ಸತ್ತೇಗಾಲ ಸೇರಿದಂತೆ ನದಿಯ ಎರಡೂ ದಂಡೆಗಳಲ್ಲಿರುವ ಗ್ರಾಮಗಳು ಮತ್ತು ನದಿಯ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನದಿಯಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಹಸು ತೊಳೆಯುವುದು, ಈಜುವುದು ಇನ್ನಿತರ ಚಟುವಟಿಕೆಗಳನ್ನು ಮಾಡಬಾರದು ಎಂದು ಈಗಾಗಲೇ ಜಿಲ್ಲಾಡಳಿತ ಸೂಚಿಸಿದೆ.
ನೆರೆ ಆತಂಕದಲ್ಲಿರುವ ಗ್ರಾಮಗಳಿಗೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಧರ್ ಭೇಟಿ ನೀಡಿದರು. ನೀರಿನ ಮಟ್ಟ ಏರುತ್ತಿದ್ದರೂ ಗ್ರಾಮಸ್ಥರು ನದಿ ನೀರಿನಲ್ಲಿ ಬಟ್ಟೆ ತೊಳೆಯುವುದು, ನೀರನ್ನು ಸಂಗ್ರಹಿಸುವುದನ್ನು ಕಂಡು ಇಒಗೆ ಕರೆ ಮಾಡಿ ಕುಡಿಯುವ ನೀರು ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.