ಚಾಮರಾಜನಗರ: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಆರಂಭಿಸಿರುವ ವಿಜಯ ಸಂಕಲ್ಪ ಯಾತ್ರೆಗೆ ಇಂದು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದರು. ಹೆಲಿಕಾಪ್ಟರ್ ಮೂಲಕ ಮಾದಪ್ಪನ ಬೆಟ್ಟಕ್ಕೆ ಬಂದಿಳಿದ ನಡ್ಡಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್ ಕುಮಾರ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸ್ವಾಗತಿಸಿದರು. ಬಳಿಕ ನಡ್ಡಾ ಮಲೆಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ನಗಾರಿ ಬಾರಿಸುವ ಮೂಲಕ ಯಾತ್ರೆಗೆ ಚಾಲನೆ ಕೊಟ್ಟರು.
ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ನಡ್ಡಾ, "ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಪ್ರತಿ ಸ್ಥಳದಲ್ಲೂ ಜನರನ್ನು ಸಂಪರ್ಕಿಸುವ ಮೂಲಕ 'ವಿಜಯ ಸಂಕಲ್ಪ'ವನ್ನು ಮುನ್ನಡೆಸುತ್ತದೆ ಎಂದರು. ಒಂದೊಮ್ಮೆ ಜಾತೀಯತೆ, ವೋಟ್ ಬ್ಯಾಂಕ್, ಕೌಟುಂಬಿಕತೆ ಆಧಾರದ ಮೇಲೆ ರಾಜಕೀಯ ನಡೆಯುತ್ತಿದ್ದ ಕಾಲವಿತ್ತು. ಆದರೆ, ಇಂದು ಪ್ರಧಾನಿ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ, ಸಬ್ ಕಾ ಪ್ರಾಯಸ್ ಎಂದು ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಭಾರತದ ಚಿತ್ರಣವೇ ಬದಲಾಗಿದೆ" ಎಂದು ಹೇಳಿದರು.
ಮುಂದುವರೆದು ಮಾತನಾಡಿ, "ಬಿಜೆಪಿ ಸರ್ಕಾರ ಆದಿವಾಸಿಗಳು, ಬಡವರು, ಮಹಿಳೆಯರು ಮತ್ತು ಹಿಂದುಳಿದವರಿಗಾಗಿ ಉತ್ತಮ ಕೆಲಸವನ್ನು ಮಾಡುತ್ತಿದೆ. ಇಂದು ಕೇಂದ್ರದಲ್ಲಿ ಪರಿಶಿಷ್ಟ ಪಂಗಡದ 12 ಜನರಿಗೆ ಸಚಿವ ಸ್ಥಾನವನ್ನ ಬಿಜೆಪಿ ಸರ್ಕಾರ ನೀಡಿದೆ. ಇನ್ನು 2013ರಲ್ಲಿ 4295 ಕೋಟಿ ರೂ.ಗಳಷ್ಟಿದ್ದ ಬಜೆಟ್ ಇಂದು 12,461 ಕೋಟಿ ರೂ.ಗೆ ಏರಿಕೆಯಾಗಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಮೋದಿ ಸರಕಾರ ಸಾಂವಿಧಾನಿಕ ಸ್ಥಾನಮಾನ ನೀಡಿದೆ. ರಾಷ್ಟ್ರೀಯ ಫೆಲೋಶಿಪ್ ಯೋಜನೆಯಡಿ ಸುಮಾರು 18 ಸಾವಿರ ಫಲಾನುಭವಿಗಳಿಗೆ ಧನಸಹಾಯ ನೀಡಲಾಗುತ್ತಿದೆ. ಇದರೊಂದಿಗೆ ಬುಡಕಟ್ಟು ಜನಾಂಗದವರು ದೇಶಕ್ಕಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ಹಿಡಿಯಲು 27 ಬುಡಕಟ್ಟು ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗುವುದು" ಎಂದು ನುಡಿದರು.