ಚಾಮರಾಜನಗರ : ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಕೈಗೊಂಡಿದ್ದಾರೆ.
ಮಾದಪ್ಪನ ಬೆಟ್ಟಕ್ಕೆ ನಿಖಿಲ್ ಪಾದಯಾತ್ರೆ ಮಹದೇಶ್ವರ ತಪ್ಪಲಾದ ತಾಳಬೆಟ್ಟದಿಂದ ದೇವಾಲಯದವರೆಗೆ 21 ಕಿಲೋಮೀಟರ್ ಅಂತರದ ಕಾಡುಹಾದಿಯನ್ನು ಅಭಿಮಾನಿಗಳು, ಎಂಎಲ್ಸಿ ಮಂಜೇಗೌಡ, ಹನೂರು ಜೆಡಿಎಸ್ ಮುಖಂಡ ಮಂಜುನಾಥ್ ಸೇರಿದಂತೆ ಹಲವರೊಟ್ಟಿಗೆ ಹೆಜ್ಜೆ ಹಾಕಿದರು. ಪಾದಯಾತ್ರೆಗೂ ಮುನ್ನ ತಾಳಬೆಟ್ಟದಲ್ಲಿ ಧೂಪ ಹಾಕಿ ಪ್ರಾರ್ಥನೆ ಸಲ್ಲಿಸಿದ ನಿಖಿಲ್, ಕಾರ್ಯಕರ್ತರು ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಪ್ರಸಾದ ವಿತರಿಸಿ ಬಳಿಕ ತಾವೂ ಸೇವಿಸಿದರು.
ನಮ್ಮದಕ್ಕೂ ಅವರಿಗೂ ಸಂಬಂಧವಿಲ್ಲ:ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ನಿಖಿಲ್ ಮಾತನಾಡಿ, ಜಲ, ನಾಡು, ನುಡಿ ವಿಚಾರ ಬಂದಾಗ ಜೆಡಿಎಸ್ ಯಾವಾಗಲೂ ಬೆಂಬಲ ಕೊಟ್ಟೇ ಕೊಡಲಿದೆ. ಆದರೆ, ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಚುನಾವಣಾ ಪ್ರಚಾರಕ್ಕೆ ಸೀಮಿತವಾಗದಿರಲಿ. ಮೇಕೆದಾಟು ಯೋಜನೆಯನ್ನು ಡಿಪಿಆರ್ ಹಂತಕ್ಕೆ ತೆಗೆದುಕೊಂಡು ಹೋದವರು ಮಾಜಿ ಸಿಎಂ ಹೆಚ್ಡಿಕೆ. ಹೆಚ್.ಡಿ.ದೇವೇಗೌಡ ಅವರು ನೀರಾವರಿ ಸಚಿವರಾಗಿದ್ದ ವೇಳೆ ಮೇಕೆದಾಟು ಯೋಜನೆ ಬಗ್ಗೆ ಸಾಕಷ್ಟು ಕಾರ್ಯ ಮಾಡಿದ್ದಾರೆ ಎಂದರು.
ಇದನ್ನೂ ಓದಿ : ಎರಡು ವರ್ಷದ ಬಳಿಕ ಮಹಾ ಶಿವರಾತ್ರಿ ಸಂಭ್ರಮ: ಶಿವನ ಆರಾಧನೆಗೆ ರಾಜಧಾನಿ ದೇಗುಲಗಳು ಸಜ್ಜು
ಇದೇ ವೇಳೆ, ಕಾಂಗ್ರೆಸ್ ಪಾದಯಾತ್ರೆ ಹಾಗೂ ಪ್ರಜ್ವಲ್, ನನ್ನ ಪಾದಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಅಜ್ಜ-ಅಜ್ಜಿ ಸೇರಿದಂತೆ ಎಲ್ಲರೂ ಶಿವ ಭಕ್ತರಾಗಿದ್ದು, ಶಿವನ ಮೇಲಿನ ಅಪಾರ ನಂಬಿಕೆಯಿಂದ ಕಾಲ್ನಡಿಗೆ ಮೂಲಕ ತೆರಳಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿರುವುದಾಗಿ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.