ಚಾಮರಾಜನಗರ :ಲೋಕಾಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷವನ್ನು ಏನೆಂದು ಕರೆಯಬೇಕು. ಜೆಡಿಎಸ್ ಇನ್ನು ಮುಂದೆ ಜಾತ್ಯತೀತ ಎಂದು ಹೇಳಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹನೂರು ತಾಲೂಕಿನ ಕೋಣನಕೆರೆ ಗ್ರಾಮದ ಬುಡಕಟ್ಟು ಶಾಲೆಗೆ ಭೇಟಿಕೊಟ್ಟ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ಕೋಮುವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಜಾತ್ಯತೀತವಾಗಿ ಉಳಿದಿದೆಯೇ ? ಜೆಡಿಎಸ್ ಅವರು ಬಿಜೆಪಿಯ ಜೊತೆ ಅಥವಾ ಇನ್ನಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೂ ನಮಗೆ ಯಾವುದೇ ತಕರಾರಿಲ್ಲ ಎಂದರು.
ಇದನ್ನೂ ಓದಿ :ಮೈತ್ರಿಯಿಂದ ಜೆಡಿಎಸ್ ಮತಗಳು ಬಿಜೆಪಿಗೆ ಬರುವುದಿಲ್ಲ, ಕಾಂಗ್ರೆಸ್ಗೆ ಸಾಕಷ್ಟು ಅನುಕೂಲ: ಹೆಚ್ ವಿಶ್ವನಾಥ್
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್, ಬಿಜೆಪಿಯ ಬಿ ಟೀಂ ಆಗಿದ್ದಿದ್ದರೆ 5 ವರ್ಷ ತಾವೇ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಜೆಡಿಎಸ್ ಜಾತ್ಯತೀತ ಎಂದು ಬರೆದುಕೊಂಡಿದ್ದಾರೆ. ಇದೀಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ನ್ನು ಏನೆಂದು ಕರೆಯಬೇಕು. ಅವರು ಏನು ಹೇಳುತ್ತಾರೆ ಅದನ್ನು ಒಪ್ಪಿಕೊಳ್ಳಬೇಕಾ?. ಎಂದು ವಾಗ್ದಾಳಿ ನಡೆಸಿದರು. 2004 ರಲ್ಲಿ ಸಿದ್ದರಾಮಯ್ಯರವರು ಬಿಜೆಪಿಯ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿದ್ದರೇ ಎಂಬ ಮಾಧ್ಯಮದವರ ಪ್ರಶ್ನೆಗೆ, ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿಲ್ಲ. ಅಡ್ವಾನಿಯವರನ್ನು ಭೇಟಿ ಮಾಡಿದ್ದು ನಿಜ ಎಂದು ಸಿದ್ದರಾಮಯ್ಯ ತಿಳಿಸಿದರು.