ಜನತಾ ದರ್ಶನ ಅಹವಾಲು ಸ್ವೀಕಾರ ಕಾರ್ಯಕ್ರಮ ಚಾಮರಾಜನಗರ: ಇಂದು ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ನಡೆಯಿತು. ಜನತಾ ದರ್ಶನದಲ್ಲಿ ಸಾಲು ಸಾಲು ಭ್ರಷ್ಟಾಚಾರ ಆರೋಪಗಳನ್ನು ಹೊತ್ತು ತಂದ ಜನರು ಜನಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟು ಆಕ್ರೋಶ ಹೊರಹಾಕಿದರು.
ಇ-ಸ್ವತ್ತಿಗೆ ಲಕ್ಷ ಲಂಚ: ಚಾಮರಾಜನಗರ ನಗರಸಭೆಯಲ್ಲಿ ಇ - ಸ್ವತ್ತು ಮಾಡಿಸಬೇಕು ಎಂದರೆ 75 ಸಾವಿರದಿಂದ ಲಕ್ಷ ರೂ. ಲಂಚ ಕೊಡಬೇಕು, 9 ಬಾರಿ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿದರೂ ಮಾಹಿತಿ ಕೊಡುತ್ತಿಲ್ಲ ಎಂದು ಚಾಮರಾಜನಗರದ ಪ್ರಶಾಂತ್ ಎಂಬವವರು ದೂರಿದರು. ಇದಕ್ಕೆ, ಉಸ್ತುವಾರಿ ಸಚಿವರು ಮಾತನಾಡಿ, ಮಾಹಿತಿ ಹಕ್ಕಿನಡಿ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಿ, ಇ-ಸ್ವತ್ತು ವಿಚಾರದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕೊಳ್ಳೇಗಾಲದ ಲಿಂಗರಾಜು ಎಂಬವರು ತಮ್ಮ ಅರ್ಜಿ ಸಲ್ಲಿಸಿ ಮಾತನಾಡಿ, ಕೊಳ್ಳೇಗಾಲದಲ್ಲಿ ಲೋಕಪಯೋಗಿ ಇಲಾಖೆಯು ರಸ್ತೆಯಲ್ಲಿ ಗೋಲ್‌ಮಾಲ್ ಮಾಡಿದೆ, ಸ್ಥಳ ಪರಿಶೀಲನೆ ನಡೆಸದೇ ವರದಿ ಕೊಟ್ಟಿದ್ದಾರೆ, 4 ಬಾರಿ ದೂರು ಕೊಟ್ಟರು ಕ್ರಮ ಇಲ್ಲ ಎಂದರು. ಸಮಾಜ ಕಲ್ಯಾಣ ಇಲಾಖೆಯು ಹಾಸ್ಟೆಲ್ಗಳಿಗೆ ಪ್ರಿಡ್ಜ್ ಕೊಟ್ಟಿದ್ದು 1 ಸ್ಟಾರ್ ಇರುವ ಪ್ರಿಡ್ಜ್ಗೆ 90 - 95 ಸಾವಿರ ಬಿಲ್ ಮಾಡಿದ್ದಾರೆ. 30 ಸಾವಿರ ರೂ. ಸ್ಟಡಿ ಟೇಬಲ್ ಮಾಡಿದ್ದು ಅದನ್ನು ದೂರದ ತುಮಕೂರಿನಿಂದ ತಂದಿದ್ದಾರೆ ಎಂದು ಕಿಡಿಕಾರಿದರು.
ಸಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದರೇ ಫಿಲಂ ಕೊಡುತ್ತಿಲ್ಲ, ವಾರ್ಡ್ಗಳಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಿದ್ದು ಒಳರೋಗಿಗಳು ಶೌಚಕ್ಕೆ ಹೊರಗಡೆ ಹೋಗಬೇಕಿದೆ ಎಂದರು. ಇದಕ್ಕೆ ಗರಂ ಆದ ಸಚಿವರು, ಸೂಕ್ತ ಚಿಕಿತ್ಸೆ ಕೊಡಿ, ಮೂಲಸೌಕರ್ಯ ಕಲ್ಪಿಸಿ ಎಂದರು. ಭ್ರಷ್ಟಾಚಾರ ಆರೋಪಕ್ಕೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಕ್ರಮ ಜರುಗಿಸುವುದಾಗಿ ಹೇಳಿದರು.
ಯಳಂದೂರಿನ ವ್ಯಕ್ತಿಯೊಬ್ಬರು ಜನತಾ ದರ್ಶನದಲ್ಲಿ ಮಾತನಾಡಿ, ಗ್ರಾಪಂನಲ್ಲಿ ಬದುಕಿರುವ ವ್ಯಕ್ತಿಯನ್ನು ಎರಡು ಸಾರಿ ಸಾಯಿಸಿದ್ದಾರೆ, ಮತ್ತೆ ಎರಡು ಬಾರಿ ಬದುಕಿಸಿದ್ದಾರೆ, ದುಡ್ಡು ಕೊಟ್ಟರೇ ಏನು ಬೇಕಾದರೂ ಮಾಡುತ್ತಾರೆ ಎಂದು ಅಳಲು ತೋಡಿಕೊಂಡಿದ್ದಕ್ಕೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಸೂಚಿಸಿದರು.
ಅಬಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿರುದ್ಧವೂ ಜನರು ದೂರುಗಳ ಸುರಿಮಳೆಯನ್ನೇ ಹರಿಸಿದರು. ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಸಾಲು ಸಾಲು ಆರೋಪ ಮಾಡಿದರು. ಇನ್ನು, ಜನತಾ ದರ್ಶನದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು ಕಂಡುಬಂದರೇ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ಕೊಟ್ಟರು. ಜನತಾ ದರ್ಶನದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಇದ್ದರು.
ಇದನ್ನೂ ಓದಿ:ಶೀಘ್ರ 1500 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಭರ್ತಿಗೆ ಚಾಲನೆ: ಸಚಿವ ಕೃಷ್ಣ ಬೈರೇಗೌಡ