ಚಾಮರಾಜನಗರ:ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚರ್ಚೆ, ಪಕ್ಷಾಂತರದ ಮಾತುಕತೆ ತಾರಕಕ್ಕೇರಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಎಂಎಲ್ಎ ಆಗಲು ಈಗಾಗಲೇ ವಿಧಾನಸೌಧಕ್ಕೆ ಏಣಿ ಹಾಕಿದ್ದಾರೆಂಬ ಮಾತುಗಳು ಆರಂಭವಾಗಿವೆ.
ಚಾಮರಾಜನಗರ ಗ್ರಾಮಾಂತರ ಠಾಣೆ ಸಿಪಿಐ ಆಗಿರುವ ಬಿ. ಪುಟ್ಟಸ್ವಾಮಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಾಕಷ್ಟು ತಯಾರಿ ನಡೆಸುತ್ತಿದ್ದು, ಈ ಬಾರಿಯ ಚುನಾವಣೆ ಅಖಾಡಕ್ಕೆ ಧುಮುಕುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.
ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಇಲ್ಲವೇ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪುಟ್ಟಸ್ವಾಮಿ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯಿಂದ ಒಂದು ಹೆಜ್ಜೆ ಆಚೆಯಿಟ್ಟಿದ್ದು, ಮೇ ತಿಂಗಳಿನಲ್ಲಿ ರಾಜಕೀಯ ರಣರಂಗಕ್ಕೆ ಇಳಿಯಲಿದ್ದಾರೆ. ಈ ಸಂಬಂಧ ದೆಹಲಿ ಮಟ್ಟದಲ್ಲಿ ಚರ್ಚೆ ಸಹ ನಡೆದಿದೆ ಎಂದು ಕೆಲ ಮೂಲಗಳು 'ಈಟಿವಿ ಭಾರತ'ಕ್ಕೆ ತಿಳಿಸಿವೆ.