ಚಾಮರಾಜನಗರ: ಇಂದು ಅಂತಾರಾಷ್ಟ್ರೀಯ ಹುಲಿಗಳ ದಿನ. ಆ ಹಿನ್ನೆಲೆ ಇಂದು ಬಿಡುಗಡೆಯಾದ ಹುಲಿ ಗಣತಿಯಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಹುಲಿಗಳು ಇರುವ ಪ್ರದೇಶವಾಗಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಮೊದಲ ಪ್ರದೇಶವಾಗಿ ಹೊರಹೊಮ್ಮಿದ್ದು, ದೇಶದಲ್ಲಿ ಅತೀ ಹೆಚ್ಚು ಹುಲಿಗಳು ಹೊಂದಿರುವ ಎರಡನೇ ಟೈಗರ್ ರಿಸರ್ವ್ ಆಗಿ ಗುರುತಿಸಿಕೊಂಡಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ 191 ಹುಲಿಗಳು ಇವೆ ಎಂದು ಅಂದಾಜು ಮಾಡಲಾಗಿದ್ದು, ನಾಗರಹೊಳೆ ರಕ್ಷಿತಾರಣ್ಯದಲ್ಲಿ 185, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 60, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 44 ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 29 ಹುಲಿಗಳಿವೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ಬಹಿರಂಗ ಪಡಿಸಿದೆ.
ಜಿಂ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ 319 ವ್ಯಾಘ್ರಗಳಿದ್ದು, ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಕ್ಷಿತ ಅರಣ್ಯ ಆಗಿದ್ದು, ಬಂಡೀಪುರ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಬಂಡೀಪುರ ಮೊದಲ ಸ್ಥಾನದಲ್ಲಿದ್ದು, ನಾಗರಹೊಳೆ ರಕ್ಷಿತಾರಣ್ಯ ಎರಡನೇ ಸ್ಥಾನದಲ್ಲಿದ್ದು, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಕ್ಷಿತಾರಣ್ಯಗಳಲ್ಲಿ ಮೊದಲ ಹಾಗೂ ಮೂರನೇ ಸ್ಥಾನ ಪಡೆಯುವ ಮೂಲಕ ಚಾಮರಾಜನಗರ ಜಿಲ್ಲೆ ಹುಲಿಗಳ ನಾಡಾಗಿದೆ.