ಚಾಮರಾಜನಗರ: ತನ್ನ ಗಾಂಭೀರ್ಯ, ಶಕ್ತಿ, ಆಹಾರ ಸರಪಳಿಯ ಪ್ರಮುಖ ಕೊಂಡಿ, ನಾಡಿನ ಸುಭಿಕ್ಷ ಲಕ್ಷಣವಾಗಿರುವ ಹುಲಿಗೂ ಸವಾಲು, ಸರಹದ್ದು ಇದೆ. ಕಾಡಿನಲ್ಲಿ ತನ್ನದೇ ಆದ ಸರಹದ್ದನ್ನು ಹೊಂದಿರುವ ಹುಲಿರಾಯ ಮನುಷ್ಯನನ್ನು ತಿಂದು ಜೀವಿಸುವ ನಿರ್ಣಯಕ್ಕೆ ಬರುವುದೇಕೆ?, ವ್ಯಾಘ್ರನಿಗೆ ಮಾನವನೇ ಯಾವಾಗ ಟಾರ್ಗೆಟ್ ಆಗ್ತಾನೆ ಎಂಬ ಪ್ರಶ್ನೆಗಳಿಗೆ ಉತ್ತರ ಹೀಗಿವೆ.
ಹುಲಿ ಬಲಿಷ್ಠ ಪ್ರಾಣಿಯಾದರೂ ಮನುಷ್ಯರನ್ನು ಕಂಡರೆ ದಾಳಿ ಮಾಡುವ ಗೋಜಿಗೆ ಹೋಗುವುದಿಲ್ಲ. ಒಂದು ವೇಳೆ ದಾಳಿ ಮಾಡಲು ಬಂದಿದ್ದಾರೆ ಎಂದುಕೊಂಡು ಪ್ರತಿದಾಳಿ ನಡೆಸಿದಾಗಲೂ ತಿನ್ನದೇ ಕೇವಲ ಸಾಯಿಸಿ ಪರಾರಿಯಾಗುತ್ತದೆ. ದಾಳಿ ಮಾಡಿದ ಬಳಿಕ ತಿಂದರೆ ಮನುಷ್ಯರನ್ನು ತನ್ನದೇ ಬೇಟೆ ಎಂದು ಭಾವಿಸಲಿದೆಯಂತೆ. ದಾಳಿಗೆ ಕಾರಣಗಳು ಹೀಗಿವೆ..
- ಗಾಯವಾಗಿರಬೇಕು, ವಯಸ್ಸಾಗಿರಬೇಕು:ಸಾಮಾನ್ಯವಾಗಿ ಹುಲಿ ಶಕ್ತಿ ಕಳೆದುಕೊಂಡಾಗ, ಗಾಯಗೊಂಡಾಗ, ವಯಸ್ಸಾಗಿ ಪ್ರಾಣಿಗಳನ್ನು ಹಿಡಿಯಲು ವಿಫಲವಾದಾಗ ಸರಹದ್ದಿನ ಕದನದಲ್ಲಿ ಬೇರೊಂದು ಹುಲಿಯಿಂದ ಬೇರ್ಪಟ್ಟು ಆಹಾರ ಸಿಗದೇ ಇರುವ ಪರಿಸ್ಥಿತಿ ಎದುರಾದಾಗ ಮನುಷ್ಯ, ಕುರಿಯಂತಹ ಪ್ರಾಣಿಗಳನ್ನು ಬೇಟೆಯಾಡಲಿದೆ.
ಸಾಮಾನ್ಯವಾಗಿ ಹುಲಿ ತನ್ನ ಕಣ್ಣ ನೇರಕ್ಕಿರುವ ಪ್ರಾಣಿಗಳನ್ನೇ ಬಲಿ ಪಡೆಯಲಿದೆ. ತನಗಿಂತ ದೊಡ್ಡದಾದ, ಎತ್ತರವಾದ ಆಕಾರ ಹೊಂದಿರುವ ಮನುಷ್ಯನನ್ನು ತನಗಿಂತ ಬಲಿಷ್ಠ ಎಂದುಕೊಂಡಿರಲಿದೆ. ಒಂದು ವೇಳೆ ಮನುಷ್ಯನನ್ನು ಒಮ್ಮೆ ತಿಂದರೆ ಮಾನವ ತನಗಿಂತ ಬಲಿಷ್ಠನಲ್ಲ, ಆತನೂ ಕೂಡ ತನ್ನ ಬಲಿ ಎಂದು ಭಾವಿಸಿ ಬೇಟೆಯಾಡಲು ಪ್ರಾರಂಭಿಸುತ್ತದೆ. ಬಹಿರ್ದೆಸೆ ವೇಳೆ, ಜಮೀನಿನಲ್ಲಿ ಕುಳಿತು ಕೆಲಸ ಮಾಡುವ ವೇಳೆ ಮನುಷ್ಯಾಕೃತಿ ಚಿಕ್ಕದಾಗಿ ಕಾಣುವುದರಿಂದ ಪ್ರಾಣಿಯೆಂದು ಭಾವಿಸಿ ಬೇಟೆಯಾಡುತ್ತದೆ. ಒಂದು ವೇಳೆ ಇದೇ ಮುಂದುವರಿದರೆ ನರಹಂತಕನಾಗಲಿದೆ ಎನ್ನುತ್ತಾರೆ ತಜ್ಞರು.
- ಹೊಂಚು ಹಾಕದ ಹುಲಿರಾಯ: ಚಿರತೆಯಂತೆ ಹೊಂಚು ಹಾಕಿ ಹುಲಿ ಎಂದಿಗೂ ಬೇಟೆಯಾಡುವುದಿಲ್ಲ. ತನ್ನ ಮೈ ತೂಕ ಹೆಚ್ಚಿರುವುದರಿಂದ ಚಿರತೆಯಂತೆ ಹುಲಿಯು ಹೆಚ್ಚು ದೂರ ಓಡಲೂ ಸಾಧ್ಯವಾಗಲ್ಲ. ಒಂದು ಕಾಡೆಮ್ಮೆಯನ್ನು ಬೇಟೆಯಾಡಿದರೆ ಹುಲಿ ಒಂದು ವಾರ ಇಟ್ಟುಕೊಂಡು ತಿನ್ನಲಿದೆ. ಆದರೆ, ಚಿರತೆಯಂತೆ ಒಂದು ಬೇಟೆ ಮುಗಿಸಿ ಮತ್ತೊಂದರ ಮೇಲೆ ಕಣ್ಣಾಕುವುದಿಲ್ಲ. ಹೊಟ್ಟೆ ಹಸಿಯದಿದ್ದರೆ ಸುಖಾಸುಮ್ಮನೆ ಪ್ರಾಣಿಯನ್ನು ಸಾಯಿಸದಿರುವುದರಿಂದ ಕಾಡಿನ ಮೆಜೆಸ್ಟಿಯಾಗಿದೆ.
- ಹುಂಡಿಪುರ ಕೇಸ್ ಬಳಿಕ ನರಭಕ್ಷಕ ಪದಕ್ಕೆ ಕತ್ತರಿ: ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಅರಣ್ಯ ವಲಯದಲ್ಲಿ ಹುಲಿಯೊಂದು ರೈತನೊಬ್ಬನನ್ನು ಕೊಂದು ತಿಂದು ಹಾಕಿತ್ತು. ಆವರೆಗೂ ಮಾಧ್ಯಮಗಳು ನರಭಕ್ಷಕ ಹುಲಿ ಎಂದೇ ಉಲ್ಲೇಖಿಸುತ್ತಿದ್ದವು. ಆ ಪ್ರಕರಣದ ವೇಳೆ ಅರಣ್ಯ ಇಲಾಖೆ ತಗಾದೆ ತೆಗೆದು ನರಭಕ್ಷಕ ಎನ್ನುವುದು ಸರಿಯಲ್ಲ. ನರಹಂತಕ ಪದ ಬಳಕೆ ಸೂಕ್ತ ಎಂದು ತಿಳಿಸಿದ್ದರಿಂದ ಹುಂಡಿಪುರದ ಪ್ರಕರಣದ ಬಳಿಕ ನರಭಕ್ಷಕ ಹುಲಿ ಪದಕ್ಕೆ ಕತ್ತರಿ ಬಿದ್ದು ನರಹಂತಕ ಪದ ಚಾಲ್ತಿಗೆ ಬಂದಿದೆ.
- ಸುಸ್ಥಿರ ಪರಿಸರದ ಸಂಕೇತ: ಹುಲಿ ಇರಬೇಕೆಂದರೆ ಅದಕ್ಕೆ ಬೇಕಾದ ಬೇಟೆ ಪ್ರಾಣಿಗಳು ಅಂದರೆ ಜಿಂಕೆ, ಕಡವೆ, ಕಾಡೆಮ್ಮೆ ಇರಬೇಕು. ಕಾಡಿನಲ್ಲಿ ಸಸ್ಯಹಾರಿ ಪ್ರಾಣಿಗಳು ಇರಬೇಕೆಂದರೆ ಹಸಿರು, ನೀರು ಇರಲೇಬೇಕು. ಹಸಿರು- ನೀರು ಇದ್ದರೇ ಕಾಡು ಸಮೃದ್ಧ ಎನ್ನಬಹುದಾಗಿದೆ. ಈ ಆಹಾರ ಸರಪಳಿಯಲ್ಲಿ ಹುಲಿ ಸುಸ್ಥಿರ ಪರಿಸರದ ಸಂಕೇತವಾಗಿದೆ.