ಚಾಮರಾಜನಗರ: ಆತ ಪದವೀಧರ, ಸಾಮಾಜಿಕ ಕಾರ್ಯಕರ್ತ ಮೇಲಾಗಿ ಸಂಪ್ರದಾಯಸ್ಥ ಹವ್ಯಕ ಬ್ರಾಹ್ಮಣ ಕುಟುಂಬದ ವ್ಯಕ್ತಿ. ಈಕೆ ಸೋಲಿಗ ಮಹಿಳೆ, ಉನ್ನತ ವ್ಯಾಸಂಗ ಮಾಡಿದವರಲ್ಲ, ಕಾಡು ಬಿಟ್ಟು ಹೋದವರಲ್ಲ. ಆದರೆ ಇವರಿಬ್ಬರ ಪ್ರೀತಿ ಕಾಡಿನಷ್ಟೇ ಹಚ್ಚಹಸಿರಾಗಿದ್ದು ವೈವಾಹಿಕ ಜೀವನ ಜೇನಿಗಿಂತ ಸಿಹಿಯಾಗಿದೆ.
80ರ ದಶಕದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಲು ಬಿಳಿಗಿರಿರಂಗನಬೆಟ್ಟಕ್ಕೆ ಬಂದ ಶಿರಸಿಯ ಸಂತೆಮನೆ ಗ್ರಾಮದ ಸತ್ಯನಾರಾಯಣ ಹೆಗಡೆ (63) ಅವರನ್ನು ಮಮಕಾರದಿಂದ ಸೆಳೆದವರು ಬೂದಿಪಡಗದ ಸೋಲಿಗ ಮಹಿಳೆ ಪುಟ್ಟಮ್ಮ. 1988ರಲ್ಲೇ ಸ್ಥಳೀಯರ ವಿರೋಧ, ಕೌಟುಂಬಿಕ ಮನಸ್ತಾಪಗಳ ನಡುವೆ ಅಂತರ್ಜಾತಿ ವಿವಾಹವಾಗಿ ಕಳೆದ 33 ವರ್ಷಗಳಿಂದ ಅದೇ ಪ್ರೀತಿ, ವಾತ್ಸಲ್ಯವನ್ನು ಕಾಪಾಡಿಕೊಂಡು ಬರುತ್ತಿದೆ.
ಸತ್ಯನಾರಾಯಣ ಹೆಗಡೆ, ಪುಟ್ಟಮ್ಮ ದಂಪತಿ ಮದುವೆಗೆ ಕಾರಣವಾಯ್ತು ಊಟ: ಸ್ವಾಮಿ ವಿವೇಕಾನಂದರಿಂದ ಪ್ರೇರಣೆಗೊಂಡು ಬಿಳಿಗಿರಿರಂಗನ ಬೆಟ್ಟಕ್ಕೆ ಬಂದ ಸತ್ಯನಾರಾಯಣ ಅವರಿಗೆ ಆರಂಭದಲ್ಲಿ ವಿಜೆಕೆಕೆ ಸುದರ್ಶನ್ ಅವರು ಮನೆ ನಿರ್ಮಾಣದ ಮೇಲ್ವಿಚಾರಣೆ, ಹಿರಿಯರಿಗೆ ಸಂಜೆ ಪಾಠ ಹೇಳಿಕೊಡುವ ಜವಾಬ್ದಾರಿ ನೀಡಿದ್ದರು. ಇದಾದ ಎರಡು ವರ್ಷದ ಬಳಿಕ ಮೈಸೂರು ರಾಮಕೃಷ್ಣ ಆಶ್ರಮವು ಬೂದಿಪಡಗದಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯ ಕೈಗೊಂಡಿತ್ತು. ಈ ಓಡಾಟದ ನಡುವೆ ಅಡುಗೆ ಮಾಡಿಕೊಳ್ಳಲು ಸತ್ಯನಾರಾಯಣ ಅವರಿಗೆ ಅಸಾಧ್ಯವಾದ್ದರಿಂದ ಊಟಕ್ಕಾಗಿ ಪುಟ್ಟಮ್ಮ ಅವರ ಮನೆಯನ್ನು ಆಶ್ರಯಿಸಿದ್ದರು. ಕಷ್ಟದ ಜೀವನ ನಡೆಸುತ್ತಿದ್ದರೂ ಹೆಗಡೆ ಅವರಿಗೆ ಊಟ ಕೊಡುತ್ತಿದ್ದ ಪುಟ್ಟಮ್ಮನ ಕುಟುಂಬದೊಟ್ಟಿಗೆ ಆತ್ಮೀಯತೆ ಬೆಳೆದು, ತಮಗೆ ಬರುತ್ತಿದ್ದ ಗೌರವಧನದಲ್ಲಿ ಅರ್ಧ ಭಾಗವನ್ನು ಪುಟ್ಟಮ್ಮ ಮನೆಗೆ ನೀಡುತ್ತಾ ಬಂದು ಕೊನೆಗೆ ಪುಟ್ಟಮ್ಮ ಅವರೊಟ್ಟಿಗೆ ಪ್ರೀತಿ ಬೆಳೆದು, ಆಕೆಯ ಮನೆಯವರನ್ನ ಒಪ್ಪಿಸಿ ವಿವಾಹವಾದರು.
80ರ ದಶಕದಲ್ಲಿ ಸಂಪ್ರದಾಯ-ಕಟ್ಟಳೆಗಳು ಹೆಚ್ಚು ಬೇರೂರಿದ್ದ ಹಿನ್ನೆಲೆಯಲ್ಲಿ ತನ್ನ ಈ ಕ್ರಾಂತಿಕಾರಕ ನಡೆಯಿಂದ ಸಹೋದರಿಯರ ಮದುವೆಗೆ ಅಡ್ಡಿಯಾಗದಿರಲೆಂದು 6 ವರ್ಷಗಳತನಕ ಹೆಗಡೆಯವರು ತಮ್ಮ ಮನೆಗೆ ವಿವಾಹದ ವಿಷಯವನ್ನೇ ಹೇಳದೆ ಮುಚ್ಚಿಟ್ಟಿದ್ದರು. ಅದು ಕೊನೆಗೆ ಕುಟುಂಬಸ್ಥರಿಗೆ ತಲುಪಿ, ಪ್ರಾರಂಭದಲ್ಲಿ ವಿರೋಧ ಮಾಡಿದರಾದರೂ ಬಳಿಕ ಪುಟ್ಟಮ್ಮ ಅವರನ್ನು ಸೊಸೆಯಾಗಿ ಸ್ವೀಕರಿಸಿದ್ದರಿಂದ ಈ ಇಬ್ಬರ ಪ್ರೀತಿ ಜಾತಿ ಎಲ್ಲೆ ಮೀರಿತ್ತು.
ಇದನ್ನೂ ಓದಿ:ಇಸ್ರೋದಿಂದ ವರ್ಷದ ಮೊದಲ ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ 3 ಉಪಗ್ರಹಗಳು
ಮಗಳದ್ದೂ ಪ್ರೇಮ ವಿವಾಹ- ಮಗನಿಗೆ ಸೋಲಿಗ ಕನ್ಯೆ: ಮದುವೆಯಾದ ಬಳಿಕ ಲಕ್ಷ್ಮೀ ಎಂದು ಹೆಸರು ಬದಲಿಸಿಕೊಂಡ ಪುಟ್ಟಮ್ಮ ಮತ್ತು ಸತ್ಯನಾರಾಯಣ ಅವರಿಗೆ ನಾಲ್ಕು ಜನ ಮಕ್ಕಳು. ಮೊದಲ ಮಗ ಅಕ್ಷಯ್ ಎಂಎಸ್ಡಬ್ಲ್ಯೂ ಮಾಡಿ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದು, ಈತನಿಗೆ ಸೋಲಿಗ ಯುವತಿಯೊಟ್ಟಿಗೆ ಮದುವೆ ಮಾಡಲಾಗಿದೆ. ಮಗಳು ಅಕ್ಷತಾ ಎಂಬುವರು ಪ್ರೇಮಿಸಿ ತಮಿಳುನಾಡು ಮೂಲದ ವ್ಯಕ್ತಿಯೊಟ್ಟಿಗೆ ಮದುವೆಯಾಗಿದ್ದು, ಚೈತನ್ಯ ಹಾಗೂ ಆದಿತ್ಯ ಎಂಬ ಮತ್ತಿಬ್ಬರು ಮಕ್ಕಳು ಉದ್ಯೋಗ ಮಾಡುತ್ತಿದ್ದಾರೆ.
'ಇದುವರೆಗೂ ನಾನು ನನ್ನ ಮಕ್ಕಳನ್ನು ಅಷ್ಟು ಪ್ರೀತಿಸಿಲ್ಲ. ಅದಕ್ಕಿಂತ ಹೆಚ್ಚು ನನ್ನಾಕೆಯನ್ನು ಪ್ರೀತಿಸುತ್ತೇನೆ. ಆಚಾರ, ವಿಚಾರ, ಆಹಾರ ಯಾವ ಅಂಶವೂ ನಮ್ಮ ಬದುಕಿನಲ್ಲಿ ಅಡ್ಡಿ ಬಂದಿಲ್ಲ. ಮಕ್ಕಳಿಗೆ ಮೊಬೈಲ್ ಕೊಡಿಸುವ ಪ್ರಮೇಯ ಬಂದಿರಲಿಲ್ಲ. ಆದರೆ ನನ್ನ ಪತ್ನಿಗೆ ನಾನು ದುಬಾರಿ ಫೋನ್ ಕೊಡಿಸಿದ್ದು, ನಾನೆಲ್ಲೇ ದೂರ ಪ್ರಯಾಣ ಬೆಳೆಸಿದರೂ ನಿತ್ಯದ ಮಾತುಕತೆ ಗಂಟೆಗಟ್ಟಲೆ ಇರುತ್ತದೆ. ಇಂದಿಗೂ ನಮ್ಮ ಪ್ರೀತಿ ನಮ್ಮ ಪ್ರೇಮಾಂಕುರದ ಮೊದಲ ದಿನದಷ್ಟೇ ಮಧುರವಾಗಿದೆ' ಎನ್ನುತ್ತಾರೆ ಸತ್ಯನಾರಾಯಣ.