ಚಾಮರಾಜನಗರ:ಗಂಡಾಗಿ ಹುಟ್ಟಿ, ಬೆಳೆಯುತ್ತಾ ಹೆಣ್ಣಾಗಿ ಮಾರ್ಪಟ್ಟು ಜನಪದ ಲೋಕದಲ್ಲಿ ಸಾಧನೆಗೈಯುತ್ತಿರುವ, ಎಲ್ಲೆಡೆ ಚಿರಪರಿಚಿತರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮನವರ ಮಾಹಿತಿ ಇಂತಿದೆ:
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಹಿರಿಯ ರಂಗ ಕಲಾವಿದೆಯಾಗಿರುವ ಮಂಜಮ್ಮ, ಮಂಗಳಮುಖಿಯಾಗಿ ಸಾಕಷ್ಟು ನೋವುಂಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮ ಆರಂಭಿಕ ಜೀವನ:
ಇವರ ಜನ್ಮನಾಮ ಮಂಜುನಾಥ. ಇವರು ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದ್ದು, ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗುವ ವೇಳೆಗಾಗಲೇ ಸ್ವೀಕರಿಸಿದ್ದ ಜೋಗತಿ ವೃತ್ತಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡರು. ತಮ್ಮ ಚಿಕ್ಕ ವಯಸ್ಸಿನಿಂದ ಕಲಾಸೇವೆ ಮಾಡುತ್ತಾ, ಜನಪದ ನೃತ್ಯದ ಮೂಲಕ ಗ್ರಾಮ, ಜಾತ್ರೆ, ಸಂತೆ, ವೇದಿಕೆ ಹೀಗೆ ಮುಂತಾದ ಸ್ಥಳಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ಕರ್ನಾಟಕದಾದ್ಯಂತ ನೀಡಿದ್ದಾರೆ.
ಸಂದ ಗೌರವ:
ಜೋಗತಿ ಕಲೆ ಪ್ರದರ್ಶನ ಜೊತೆಗೆ, ನಾಟಕ, ನಿರ್ದೇಶನ, ಹಾಡು, ಕುಣಿತ ಮುಂತಾದ ಮನೋರಂಜನಾತ್ಮಕ ಕಲೆಗಳನ್ನು ರೂಢಿಸಿಕೊಂಡಿರುವ ಮಂಜಮ್ಮ ಜೋಗತಿ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
- 2006: ರಾಜ್ಯ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
- 2007 : ಜಾನಪದ ಶ್ರೀ ಪ್ರಶಸ್ತಿ
- 2008: ಜಾನಪದ ಲೋಕ ಪ್ರಶಸ್ತಿ
- 2010: ಕನ್ನಡ ರಾಜ್ಯೋತ್ಸವ ಪ್ರಶಸ್ತಿ
- ಜಾನಪದ ಜಾನ ಪ್ರಶಸ್ತಿ
- 2014: ಸಮಾಜ ಸಖಿ ಪ್ರಶಸ್ತಿಸಂದೇಶ ಪ್ರಶಸ್ತಿ
- 2012 : ಶ್ರೀ ತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ
- ಇದೀಗ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆಯಾಗಿದ್ದಾರೆ
ಇಂದು ಜಾನಪದ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಇವರಿಗೆ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿದೆ. ಇವರನ್ನು ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಅಂದು ಹೆತ್ತವರೇ ದೂರ ಮಾಡಿದರೂ ಸಹ ಯಾರಿಗೂ ಅಂಜದೇ, ಇಂದು ಬದುಕು ಕಟ್ಟಿಕೊಂಡು ನೂರಾರು ಜನರಿಗೆ ಆದರ್ಶರಾಗಿದ್ದಾರೆ.
ಜೋಗತಿಗೆ ಇನ್ನೂ ಸೂರಿಲ್ಲ:
ಇವರಿಗೆ ವಾಸಿಸಲು ಈಗಲೂ ಸರಿಯಾದ ಮನೆಯಿಲ್ಲ. ಒಂದು ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದು ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದಾರೆ. ಹಾಗೆಯೇ ಪದ್ಮಶ್ರೀ ಪ್ರಶಸ್ತಿ ಕೊಟ್ಟ ರೀತಿಯಲ್ಲಿಯೇ ಒಂದು ಎಕರೆ ಜಾಗ ಕೊಟ್ಟು ರಂಗಮಂದಿರ ನಿರ್ಮಿಸಲು ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.