ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರಿನ ಇಂದಿರಾ ಕ್ಯಾಂಟೀನ್ಗಳು ಕಳೆದ 4 ದಿನಗಳಿಂದ ಬಾಗಿಲು ಮುಚ್ಚಿದ್ದು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ದುಬಾರಿ ಹಣ ಕೊಟ್ಟು ಹೋಟೆಲ್ ಗೆ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಳ್ಳೇಗಾಲದಲ್ಲಿ ನಿತ್ಯ 1,500 ಮಂದಿ, ಗುಂಡ್ಲುಪೇಟೆಯಲ್ಲಿ 900 ಹಾಗೂ ಯಳಂದೂರಿನಲ್ಲಿ 400 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದರು. ಆದರೆ, ಕಳೆದ 4 ದಿನಗಳಿಂದ ಬಾಗಿಲು ಮುಚ್ಚಿರುವುದರಿಂದ ಹಿಡಿಶಾಪ ಹಾಕಿಕೊಂಡು ವಾಪಸ್ ಆಗುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ಜವಾಬ್ದಾರಿ ವಹಿಸಿಕೊಂಡಿದ್ದ ಚೆಪ್ ಟಾಕ್ ಎಂಬ ಏಜೆನ್ಸಿಗೆ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಬಾಗಿಲು ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ. 5 ರೂ.ಗೆ ತಿಂಡಿ, 10 ರೂ.ಗೆ ಊಟ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಎಂಬ ಕಾರಣದಿಂದ ವಿವಿಧ ಗ್ರಾಮದ ಕೂಲಿ ಕಾರ್ಮಿಕರು ನಿತ್ಯ ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆ ಇಂದಿರಾ ಕ್ಯಾಂಟೀನ್‍ಗೆ ಆಹಾರ ಸೇವಿಸುತ್ತಿದ್ದರು. ಆದರೆ, ಕಳೆದ 4 ದಿನದಿಂದ ಬಾಗಿಲು ಮುಚ್ಚಿರುವ ಹಿನ್ನೆಲೆ ಜನರು ಕ್ಯಾಂಟೀನ್ ಬಳಿ ಬಂದು ಬಾಗಿಲು ಹಾಕಿರುವುದನ್ನು ಕಂಡು ವಾಪಸ್ ಆಗುತ್ತಿದ್ದಾರೆ.