ಚಾಮರಾಜನಗರ :ದಸರಾ ಸಡಗರ ಮುಗಿಸಿದ ಬಳಿಕ ವಾರಾಂತ್ಯದ ರಜೆ ಹಿನ್ನೆಲೆ ಕಾಡು ಸುತ್ತಲು, ಪ್ರಾಣಿಗಳನ್ನು ಕಾಣಲು ಬಿಳಿಗಿರಿರಂಗನ ಬೆಟ್ಟ, ಬಂಡೀಪುರ ಸಫಾರಿ ಕೇಂದ್ರಕ್ಕೆ ಪ್ರವಾಸಿಗರು ಲಗ್ಗೆ ಹಾಕಿದ್ದಾರೆ.
ಬಿಳಿಗಿರಿರಂಗನ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ.. 2 KMವರೆಗೂ ನಿಂತ ವಾಹನಗಳ ಸಾಲು.. ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಇಂದು ಸಾವಿರಾರು ಜನರು ಆಗಮಿಸಿದ್ದು, ಸುಮಾರು ಎರಡೂವರೆ ಕಿ.ಮೀ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಬಂಡೀಪುರ ಸಫಾರಿ ಕೌಂಟರ್, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸುತ್ತಮುತ್ತಲಿನ ರೆಸಾರ್ಟ್‌ಗಳು ಪ್ರವಾಸಿಗರಿಂದ ಗಿಜಿಗುಡುತ್ತಿವೆ. ಕಳೆದ ಎರಡು ದಿನಗಳಿಂದ ಚಿರತೆ, ಆನೆಗಳ ಹಿಂಡು, ಸೀಳುನಾಯಿಗಳು ಸಹ ಕಾಣಸಿಕ್ಕಿವೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಿಮಚ್ಛಾದಿತವಾಗಿ ಕಣ್ಮನಗಳಿಗೆ ಹಬ್ಬ ಉಂಟು ಮಾಡುವುದರಿಂದ ಸಾವಿರಾರು ಮಂದಿ ಪ್ರವಾಸಿಗರು ಬೆಟ್ಟದ ಅಂದವನ್ನು ಸವಿದರು. ಸತತ ಮಳೆಯಾಗಿ ಬಂಡೀಪುರ ಕೆರೆ ಕಟ್ಟೆ ತುಂಬಿರುವುದರಿಂದ ಪ್ರಾಣಿಗಳ ಹೆಚ್ಚಿನ ದರ್ಶನವಾಗದೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.