ಕೊಳ್ಳೇಗಾಲ:ಕಾರಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದು, ಸಾಗಣೆಗಾಗಿ ಬಳಸಲಾಗಿದ್ದ ಮಾರುತಿ ಕಾರೊಂದನ್ನು ವಶಪಡಿಕೊಳ್ಳಲಾಗಿದೆ.
ಅಕ್ರಮ ಪಡಿತರ ಸಾಗಣೆ... ಕಾರು ಸಮೇತ ಆರೋಪಿಗಳ ವಶ
ಕಾರಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದವರ ಮೇಲೂ ಗ್ರಾಮಾಂತರ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
ಕಲ್ಕುಣಿ ಗ್ರಾಮದ ಮುಜಾಮಿಲ್, ಸೈಯದ್ ಅಹಮದ್ ಬಂಧಿತ ಆರೋಪಿಗಳು. ಕೊಳ್ಳೇಗಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಡಿತರ ಅಕ್ಕಿಯನ್ನು ಖರೀದಿಸಿ ಮಳವಳ್ಳಿ ಕಡೆಗೆ ಮಾರುತಿ ಕಾರಿನಲ್ಲಿ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಬ್ ಇನ್ಸಪೆಕ್ಟರ್ ರಾಜೇಂದ್ರ ತಂಡದವರು, ಬಂಧಿತರಿಂದ 477 ಕೆಜಿ ಪಡಿತರ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾವೇರಿ ನದಿ ತೀರದಲ್ಲಿ ಆಕ್ರಮ ಮರಳು ಸಾಗಣೆ, ಆರೋಪಿ ಪರಾರಿ: ಸತ್ತೇಗಾಲ ಸಮೀಪದ ಶಿವನ ಸಮುದ್ರದ ಕಾವೇರಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳನ್ನು ಟ್ರಾಕ್ಟರ್ಗೆ ತುಂಬುತ್ತಿದ್ದವರ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
ಶಿವನ ಸಮುದ್ರದ ಕಡೆಗದ್ದೆಡೊಡ್ಡಿ ಕೃಷ್ಣ ಅಲಿಯಾಸ್ ಚಂಗು ಎಂಬಾತ, ಶಿವನಸಮುದ್ರದ ಬಳಿಯ ಕಾವೇರಿ ನದಿ ತೀರದಲ್ಲಿ ಟ್ರಾಕ್ಟರ್ ಗೆ ಮರಳು ತುಂಬುವ ವೇಳೆ ಗಸ್ತಿನಲ್ಲಿದ್ದ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಯು ಸ್ಥಳದಲ್ಲೇ ಮರಳು ತುಂಬಿದ ಟ್ರಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ.
ಸದ್ಯ ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಟ್ರಾಕ್ಟರ್ ವಶಕ್ಕೆ ಪಡೆದು, ಪರಾರಿಯಾದ ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.