ಚಾಮರಾಜನಗರ :ಮಡಹಳ್ಳಿ ಬಿಳಿಕಲ್ಲು ಕ್ವಾರಿ ಗುಡ್ಡ ಕುಸಿತದ ಬೆನ್ನಲ್ಲೇ ಚಿಕ್ಕಹೊಳೆ ಜಲಾಶಯಕ್ಕೆ ಅಕ್ರಮ ಕರಿಕಲ್ಲು ಗಣಿಗಾರಿಕೆಯಿಂದ ಕಂಟಕ ಎದುರಾಗಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.
ಚಿಕ್ಕಹೊಳೆ ಜಲಾಶಯದ ಕ್ರಸ್ಟ್ ಗೇಟ್ನ ಕಣ್ಣಳತೆ ದೂರದಲ್ಲಿ ಅದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ಜೊತೆಗೆ ಕಾಲುವೆ ಸಮೀಪವೇ ಹಾಡಹಗಲೇ ಕರಿಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆದ್ರೆ ಅಧಿಕಾರಿಗಳು ಮೌನ ವಹಿಸಿದ್ದಾರೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಕಾಲುವೆ ಪಕ್ಕವೇ ಅಕ್ರಮ ಗಣಿಗಾರಿಕೆ ಆರೋಪ ಚಿಕ್ಕಹೊಳೆ ಗ್ರಾಮದ ಸರ್ವೇ ನಂ.116 ರಲ್ಲಿ ಲೋಕಪ್ಪ ಎಂಬವರ ಜಮೀನಿನಲ್ಲಿ ಈ ಕರಿಕಲ್ಲನ್ನು ತೆಗೆಯಲಾಗುತ್ತಿದ್ದು, ಈಗಾಗಲೇ 50 ಅಡಿಗೂ ಹೆಚ್ಚು ಆಳ ತೋಡಿ ಕಲ್ಲನ್ನು ತೆಗೆಯಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ಕೊಟ್ಟರೂ ಯಾವುದೇ ಪ್ರಯೋಜನವಿಲ್ಲದಂತಾಗಿದ್ದು ಮುಂದೆ ಜಲಾಶಯಕ್ಕೆ ಏನಾದರೂ ಆದರೆ ಯಾರು ಹೊಣೆ, ಇದು ಏನಾದರೂ ನಿಲ್ಲದಿದ್ದರೇ ಧರಣಿ ಕೂರುತ್ತೇವೆ ಎಂದು ಸ್ಥಳೀಯರಾದ ಸೋಮಣ್ಣ, ಮಹೇಶ್, ನಂಜುಂಡಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳಿಂದ ಜಾಣ ಕುರುಡುತನ ಪ್ರದರ್ಶನ:ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೇ ಮಣ್ಣು ತೆಗೆಯಲು ಅವರು ಅನುಮತಿ ಪಡೆದುಕೊಂಡಿದ್ದು, ಅವರ ಜಮೀನಿನಲ್ಲಿ ಅವರು ಮಣ್ಣು ತೆಗೆಯುತ್ತಿದ್ದಾರೆ. ಕಲ್ಲು ಗಣಿಗಾರಿಕೆ ನಡೆಸುವ ಬಗ್ಗೆ ಮಾಹಿತಿ ಇಲ್ಲಾ, ಪರಿಶೀಲನೆ ನಡೆಸುವುದಾಗಿ ಹಾರಿಕೆ ಉತ್ತರ ಕೊಡುತ್ತಾರೆ. ಮಣ್ಣು ತೆಗೆಯಬೇಕೆಂದರೂ ಇಂತಿಷ್ಟು ಎಂಬ ನಿಬಂಧನೆಗಳಿವೆ. ಆದರೆ, ಇವರು ಕಂಪ್ರೆಸ್ಸರ್, ಹಿಟಾಚಿಗಳನ್ನಿಟ್ಟುಕೊಂಡು 50 ಅಡಿಗೂ ಹೆಚ್ಚು ಆಳ ತೆಗೆದಿರುವುದು ಜೊತೆಗೆ ಕರಿಕಲ್ಲುಗಳನ್ನು ಗುಡ್ಡೆ ಹಾಕಿರುವುದು ಮೇಲ್ನೋಟಕ್ಕೆ ಅಕ್ರಮ ನಡೆದಿದೆ ಎನ್ನುವುದಕ್ಕೆ ಪುಷ್ಟಿ ನೀಡುತ್ತಿದೆ ಅಂತಾರೆ ಸ್ಥಳೀಯರು.
ಗುಂಡ್ಲುಪೇಟೆಯಲ್ಲಿ ಗುಡ್ಡ ಕುಸಿದಿದ್ದರೇ ಚಾಮರಾಜನಗರ ತಾಲೂಕಿನಲ್ಲಿ ಜಲಾಶಯಕ್ಕೆ ಈ ಗಣಿಗಾರಿಕೆ ಕಂಟಕವಾಗಿ ಪರಿಣಮಿಸುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಮೈನಿಂಗ್ ಮಾಫಿಯಾವನ್ನು ಮಟ್ಟ ಹಾಕುತ್ತೇನೆಂದು ಗುಡುಗಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇತ್ತ ಗಮನ ಹರಿಸಬೇಕಿದೆ.