ಚಾಮರಾಜನಗರ: ಬುಲೆಟ್ ಬೈಕ್ ಮೂಲಕ ನಿರಂತರವಾಗಿ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದ ಐನಾತಿವೋರ್ವನನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಕೊಳ್ಳೇಗಾಲದ ಸತ್ತೇಗಾಲ ಚೆಕ್ ಪೋಸ್ಟ್ನಲ್ಲಿ ನಡೆದಿದೆ.
ಹನೂರು ತಾಲೂಕಿನ ಪುಷ್ಪಪುರ ಗ್ರಾಮದ ಶಿವರಾಮು (47) ಬಂಧಿತ ಆರೋಪಿ. ಹನೂರು ತಾಲೂಕಿನ ಪುಷ್ಪಪುರದಿಂದ 150 ಗ್ರಾಂ ಒಣ ಗಾಂಜಾವನ್ನು ಬೆಂಗಳೂರಿಗೆ ತೆಗೆದೊಯ್ಯುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಅಬಕಾರಿ ಸಿಪಿಐ ಮೀನಾ ನೇತೃತ್ವದ ತಂಡ ಇವರನ್ನು ಬಂಧಿಸಿದೆ.
ಪ್ರತಿವಾರವೂ ಈತ ಬೆಂಗಳೂರಿಗೆ ಗಾಂಜಾವನ್ನು ತನ್ನ ಬುಲೆಟ್ ಬೈಕ್ ಮೂಲಕ ಸಾಗಿಸುತ್ತಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿದ್ದು ಲಾಕ್ಡೌನ್ ಅವಧಿಯಲ್ಲೂ ಈತ ತೆರಳಿದ್ದನೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರಿಗೆ ಚಾಮರಾಜನಗರ ಜಿಲ್ಲೆಯಿಂದಲೇ ಹೆಚ್ಚು ಗಾಂಜಾ ಪೂರೈಕೆಯಾಗುತ್ತಿದೆ ಎಂದು ಕಳೆದ ವರ್ಷ ಹಿರಿಯ ಪೊಲೀಸ್ ಅಧಿಕಾರಿಗಳು ದೂರಿದ್ದರು. ಇದರಿಂದ ಎಚ್ಚೆತ್ತ ಹಿಂದಿನ ಎಸ್ಪಿಯಾಗಿದ್ದ ಧರ್ಮೆಂದ್ರಕುಮಾರ್ ಮೀನಾ 4-5 ತಿಂಗಳಲ್ಲಿ ಬರೋಬ್ಬರಿ 60ಕ್ಕೂ ಹೆಚ್ಚು ಗಾಂಜಾ ಪ್ರಕರಣಗಳನ್ನು ದಾಖಲಿಸಿ ನಶೆ ಏರಿಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು.
ಈಗ ಶಿವರಾಮ್ ನೇರವಾಗಿ ಬೆಂಗಳೂರಿಗೆ ಗಾಂಜಾ ಸಾಗಿಸುವುದು ಬೆಳಕಿಗೆ ಬಂದಿರುವುದರಿಂದ ಕಿಂಗ್ ಪಿನ್ ಹುಡುಕಾಟದಲ್ಲಿ ಅಬಕಾರಿ ಇಲಾಖೆ ಮುಂದಡಿಯಿಟ್ಟಿದೆ. ಇಲ್ಲಿಯವರೆಗೆ ಸ್ಥಳೀಯವಾಗಿ ಗಾಂಜಾ ಬೆಳೆಗಾರರು, ಮಾರಾಟಗಾರರು ಮಾತ್ರ ಬಲೆಗೆ ಬಿದ್ದಿದ್ದರೇ ಹೊರತು ಬೆಂಗಳೂರಿನ ಸಂಪರ್ಕ ಇಟ್ಟುಕೊಂಡವರು ಬಲೆಗೆ ಬಿದ್ದಿರಲಲ್ಲ. ಗಾಂಜಾ ಪೂರೈಕೆಯ ಕಿಂಗ್ ಪಿನ್ ಹುಡುಕುವಲ್ಲಿ ಶಿವರಾಮ್ ಉತ್ತಮ ಮೂಲವಾಗಿದ್ದಾನೆ ಎಂದು ಈಟಿವಿ ಭಾರತಕ್ಕೆ ತನಿಖಾ ಮೂಲಗಳು ತಿಳಿಸಿವೆ.
ಸದ್ಯ, ಅಬಕಾರಿ ಪೊಲೀಸರು ಬಂಧಿತನಿಂದ ಒಣ ಗಾಂಜಾ ಹಾಗೂ ಬುಲೆಟ್ ಬೈಕ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.