ಚಾಮರಾಜನಗರ :ಬೆಲೆ ಏರಿಕೆ, ರೈತ ವಿರೋಧಿ ಆಡಳಿತ, ಈಶ್ವರಪ್ಪ ಬಂಧನ ಆಗದಿರುವುದನ್ನು ಖಂಡಿಸಿ ನಗರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೈ ಪಡೆ ಬೃಹತ್ ಪ್ರತಿಭಟನೆ ನಡೆಸಿತು. ಮಾರಿಗುಡಿ ಸಮೀಪ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಈಶ್ವರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
40% ಸರ್ಕಾರದ ವಿರುದ್ಧ ತನಿಖೆ ಮಾಡಿಸಲಿ :ಆಧಾರರಹಿತವಾಗಿ ನನ್ನ ಸರ್ಕಾರವನ್ನು ಅಂದು ನರೇಂದ್ರ ಮೋದಿ 10% ಕಮಿಷನ್ ಸರ್ಕಾರ ಎಂದು ಟೀಕಿಸಿದ್ದರು. ಆದರೆ, ಈಗ ಬಿಜೆಪಿ ಸರ್ಕಾರ 40% ಕಮಿಷನ್ ಕೇಳುತ್ತಿದೆ ಎಂದು ಗುತ್ತಿಗೆದಾರರ ಸಂಘವೇ ಪ್ರಧಾನಿಗೆ 8 ತಿಂಗಳ ಹಿಂದೆ ಪತ್ರ ಬರೆದಿದೆ. ನಾನು ತಿನ್ನಲ್ಲ, ತಿನ್ನಲೂ ಬಿಡಲ್ಲ ಎನ್ನುವ ನರೇಂದ್ರ ಮೋದಿ ಅವರಿಗೆ ತಾಕತ್ ಇದ್ದರೇ, 40% ಸರ್ಕಾರದ ವಿರುದ್ಧ ತನಿಖೆ ಮಾಡಿಸಲಿ. ಎಲ್ಲಾ ಏಜೆನ್ಸಿಗಳು ಅವರ ಬಳಿಯೇ ಇದೆಯಲ್ಲ ಎಂದು ಸವಾಲು ಹಾಕಿದರು.
ಸ್ವತಂತ್ರ ಭಾರತದ ಇದುವರೆಗಿನ ಪ್ರಧಾನಮಂತ್ರಿಗಳಲ್ಲಿ ಮೋದಿ ಅವರಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎನ್ನುವ ಪ್ರಧಾನಿ, ರಸಗೊಬ್ಬರಗಳ ನಿರಂತರ ಬೆಲೆ ಏರಿಕೆ ಮೂಲಕ ಅನ್ನದಾತರಿಂದಲೂ ಸಾವಿರಾರು ಕೋಟಿ ರೂ. ವಸೂಲಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 15 ಲಕ್ಷ ಟನ್ ರಾಗಿ ಬೆಳೆಯಲಾಗಿದೆ. ಆದರೆ, ಸರ್ಕಾರ ಬೆಂಬಲ ಬೆಲೆ ಮೂಲಕ 1.90 ಲಕ್ಷ ಟನ್ ರಾಗಿಯನ್ನು ಮಾತ್ರ ಕೊಂಡುಕೊಂಡಿದ್ದು, ಉಳಿದ ರೈತರು ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ಜನಪರ ಆಡಳಿತ ಅದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ :ಕಾಂಗ್ರೆಸ್ ಜಾರಿ ಮಾಡಿದ್ದ ಹಲವು ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ. ದಲಿತ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ ಸರ್ಕಾರ ಇದಾಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ. ಕಳೆದ ಒಂದು ವರ್ಷದಿಂದ ಹಾಸ್ಟೆಲ್ಗಳಿಗೆ ಸೋಪ್ ಕಿಟ್ ಕೊಟ್ಟಿಲ್ಲ. ಇಂತಹ ಸರ್ಕಾರ ಇರಬೇಕಾ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ. ಭ್ರಷ್ಟಾಚಾರ ಮುಕ್ತ ಕರ್ನಾಟಕ, ಸಂವಿಧಾನದ ಉಳಿಸುವ ಕಾರ್ಯ, ಜನಪರ ಆಡಳಿತ ಅದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದರು.