ಚಾಮರಾಜನಗರ:ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳ ಆಗುತ್ತಿರುವ ಹಿನ್ನೆಲೆ ಜಿಲ್ಲೆಯ 67 ಬೆಡ್‌ಗಳ ಸಾಮರ್ಥ್ಯದ ತೀವ್ರ ನಿಗಾ ಘಟಕಗಳು (ಐಸಿಯು) ಭಾನುವಾರ ಸಂಪೂರ್ಣ ಭರ್ತಿಯಾಗಿವೆ.
ಜಿಲ್ಲಾಸ್ಪತ್ರೆಯಲ್ಲಿ 48 ಬೆಡ್, ಹನೂರು ತಾಲೂಕಿನ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ 4, ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10, ಕೊಳ್ಳೇಗಾಲ ತಾಲೂಕು ಆಸ್ಪತ್ರೆಯಲ್ಲಿ 5 ಹಾಗೂ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ 4 ಬೆಡ್ ಸೇರಿ ಜಿಲ್ಲೆಯಲ್ಲಿ 67 ಐಸಿಯು ಬೆಡ್‌ಗಳಿವೆ. ಇವು ಭಾನುವಾರ ಸಂಪೂರ್ಣ ಭರ್ತಿಯಾಗಿವೆ.
ಜಿಲ್ಲೆಯ ತೀವ್ರ ನಿಗಾ ಘಟಕಗಳಲ್ಲಿ 12 ಜನ ವೆಂಟಿಲೇಟರ್ ಸಹಿತ ಬೆಡ್‌ನಲ್ಲಿದ್ದರೆ, ಉಳಿದ 55 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಕಡಿಮೆ ತೀವ್ರತೆಯ ಸೋಂಕಿತರನ್ನು ಜಿಲ್ಲೆಯ ಇತರೆಡೆ ಇರುವ ಐಸಿಯು ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾನ್ಯ ಬೆಡ್‌ನಲ್ಲಿ 31 ಮಂದಿ, ಆಕ್ಸಿಜನ್ ವ್ಯವಸ್ಥೆ ಬೆಡ್ ಮೇಲೆ 105 ಜನ ಇದ್ಧಾರೆ. ಜಿಲ್ಲಾಸ್ಪತ್ರೆಯಲ್ಲಿ ಹೊಸ ಕಟ್ಟಡದ ಮೊದಲ ಹಾಗೂ ಎರಡನೇ ಅಂತಸ್ತಿನಲ್ಲಿ ಈಗಾಗಲೇ 48 ಬೆಡ್‌ಗಳ ಐಸಿಯು ಘಟಕವಿದ್ದು, ಅದೇ ಕಟ್ಟಡದ ನೆಲಮಹಡಿಯಲ್ಲಿ 24 ಬೆಡ್ ಸಾಮರ್ಥ್ಯದ ಐಸಿಯು ಘಟಕ ನಿರ್ಮಾಣಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯ ನೆಲಮಹಡಿಯ ಕೊಠಡಿಯಲ್ಲಿ ಕಡಿಮೆ ತೀವ್ರತೆಯ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನು ಐಸಿಯು ಘಟಕವಾಗಿ ಪರಿವರ್ತಿಸಿ ಇನ್ನು ಮುಂದೆ ಮಧ್ಯಮ ತೀವ್ರತೆಯ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ನಡೆಸಲಾಗಿದೆ. ಜಿಲ್ಲಾ ಕೋವಿಡ್ ಚಿಕಿತ್ಸಾ ಕೇಂದ್ರವು 150 ಬೆಡ್ ಸಾಮರ್ಥ್ಯದ ಆಸ್ಪತ್ರೆಯಾಗಲಿದೆ. 24 ಐಸಿಯು ಬೆಡ್‌ಗಳ ಸೇರ್ಪಡೆಯಿಂದ ಜಿಲ್ಲೆಯು 91 ಐಸಿಯು ಬೆಡ್‌ಗಳ ಸಾಮರ್ಥ್ಯ ಹೊಂದಲಿದೆ ಎಂದು ಕೋವಿಡ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಮಹೇಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಐಸಿಯು ಘಟಕಕ್ಕೆ ಬೇಕಾದ ಸಾಧನ ಸಲಕರಣೆಗಳ ತರಿಸುವ ಪ್ರಕ್ರಿಯೆ ನಡೆದಿದೆ. ತೀವ್ರ ನಿಗಾ ಘಟಕಕ್ಕೆ ಹೆಚ್ಚಿನ ಆಮ್ಲಜನಕದ ಅಗತ್ಯತೆ ಇರುವುದರಿಂದ ಜಿಲ್ಲೆಯಲ್ಲಿ ದ್ರವರೂಪದ ಆಮ್ಲಜನಕ ಘಟಕ (ಎಲ್‌ಎಂಒ) ಆರಂಭವಾಗುತ್ತಿದ್ದಂತೆ ಐಸಿಯು ಘಟಕವೂ ಕಾರ್ಯಾರಂಭ ಮಾಡಲಿದೆ. ಜಿಲ್ಲೆಯಲ್ಲಿ ಸದ್ಯ 350 – 400 ಆಕ್ಸಿಜನ್ ಸಿಲಿಂಡರ್‌ಗಳು ಪೂರೈಕೆಯಾಗುತ್ತಿದೆ. ಐಸಿಯು ಇನ್ನಷ್ಟು ಆರಂಭವಾದರೆ ಮತ್ತಷ್ಟು ಸಿಲಿಂಡರ್‌ಗಳ ಅಗತ್ಯತೆ ಬೀಳಲಿದೆ ಎಂದು ಡಾ.ಮಹೇಶ್ ಹೇಳಿದರು.
ಮೊದಲ ಅಲೆಯ ಸಂದರ್ಭದಲ್ಲಿ 119 ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಗರಿಷ್ಠ ಸಂಖ್ಯೆಯಾಗಿತ್ತು. ಆದರೆ, ಭಾನುವಾರ 283 ಪ್ರಕರಣ ದಾಖಲಾಗುವುದರೊಂದಿಗೆ ಮೊದಲ ಅಲೆಯನ್ನು ಮೀರಿಸಿದೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.