ಕೊಳ್ಳೇಗಾಲ (ಚಾಮರಾಜನಗರ): ಇಲ್ಲಿನ ಪಾಳ್ಯ ಗ್ರಾಮದ ಸಮೀಪದ ದೊಡ್ಡಕೆರೆಯ ಏರಿ ಒಡೆದು ಸಮೀಪದ ನೂರಾರು ಎಕರೆ ಕೃಷಿ ಜಮೀನಿಗೆ ನೀರು ನುಗ್ಗಿದ್ದು, ಭತ್ತದ ಬೆಳೆ ನಾಶವಾಗಿದೆ.
ಉತ್ತಮ ಮಳೆಯಿಂದ ಸಂಗ್ರಹವಾದ ನೀರು ಹಾಗೂ ಜಲಾಶಯಗಳಿಂದ ನಾಲೆಗೆ ಹರಿಬಿಟ್ಟ ನೀರಿನಿಂದ ತಾಲೂಕಿನ ಕೆರೆಗಳು ತುಂಬಿವೆ. ತಡರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಇಲ್ಲಿನ ಪಾಳ್ಯ ಗ್ರಾಮದ ದೊಡ್ಡಕೆರೆ ಏರಿ ಕುಸಿದಿದ್ದು, ಕೆರೆಗೆ ಹೊಂದಿಕೊಂಡಂತಿದ್ದ ಕೃಷಿ ಜಮೀನಿಗೆ ನೀರು ನುಗ್ಗಿದೆ. ಇದರಿಂದಾಗಿ ನೂರಾರು ಎಕರೆಯಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆ ನಾಶವಾಗಿದೆ.
ಕೆರೆ ಏರಿ ಒಡೆದು ನೂರಾರು ಎಕರೆ ಕೃಷಿ ಜಮೀನು ಜಲಾವೃತ ಈ ಕುರಿತು ಮಾತನಾಡಿದ ರೈತ ಸೀಗಣ್ಣ, ದೊಡ್ಡಕೆರೆ 750 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. ಕೆರೆ ಬಳಿಯಲ್ಲಿಯೇ ಕೃಷಿ ಜಮೀನಿದ್ದು, ನಿನ್ನೆ ತಡರಾತ್ರಿ ಕೆರೆ ಏರಿ ಕುಸಿದು ರಾತ್ರಿಯಿಡೀ ಜಮೀನಿಗೆ ನೀರು ಹರಿದು ನೂರಾರು ಎಕರೆಯಲ್ಲಿ ನಾಟಿ ಮಾಡಲಾಗಿದ್ದ ಭತ್ತ ಸಂಪೂರ್ಣ ನಾಶವಾಗಿದೆ.
ಬೆಳಗ್ಗೆ 6 ಗಂಟೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಯಾರೂ ಬಂದು ನೋಡಲಿಲ್ಲ. ಕೆರೆ ನೀರು ನಿಲ್ಲಿಸುವ ಕೆಲಸ ಮಾಡಲಿಲ್ಲ. ನೂರಾರೂ ಎಕರೆ ಕೆರೆ ಜಾಗ ಒತ್ತುವರಿಯಾಗಿರುವ ಪರಿಣಾಮ ನೀರಿನ ಸಂಗ್ರಹಕ್ಕೆ ತೊಂದರೆಯಾಗಿ, ನೀರಿನ ಒತ್ತಡಕ್ಕೆ ಕೆರೆ ಏರಿ ಕುಸಿದಿದೆ. ನೀರಾವರಿ ಇಲಾಖೆಯವರು ತಿಂಗಳಿಗೊಮ್ಮೆಯೂ ಬಂದು ಇಲ್ಲಿನ ಸಮಸ್ಯೆ ಕುರಿತು ಗಮನ ಹರಿಸಲ್ಲ ಎಂದು ಆರೋಪಿಸಿದ್ದಾರೆ.