ಚಾಮರಾಜನಗರ : ರಾಜ್ಯದ ಪ್ರಮುಖ ಪ್ರವಾಸಿ ತಾಣ ಹಾಗೂ ಯಾತ್ರಾಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇಗುಲದಲ್ಲಿ ಇಂದು ಹುಂಡಿ ಎಣಿಕೆ ನಡೆದಿದ್ದು, 3 ತಿಂಗಳಿನಲ್ಲಿ 8.10 ಲಕ್ಷ ರೂ. ಸಂಗ್ರಹಗೊಂಡಿದೆ. ವಿದೇಶಿ ಪ್ರವಾಸಿಗರು ಕೂಡ ಇಲ್ಲಿಗೆ ಭೇಟಿ ನೀಡಲಿರುವುದರಿಂದ ಅವರ ದೇಶದ ಕರೆನ್ಸಿಗಳು ಹುಂಡಿಯಲ್ಲಿ ಸಿಗುತ್ತಿದೆ. 41 ಅಮೆರಿಕನ್ ಡಾಲರ್, ನೇಪಾಳದ ನೋಟುಗಳನ್ನು ವಿದೇಶಿಗರು ಅರ್ಪಿಸಿದ್ದಾರೆ. ಹುಂಡಿಯಲ್ಲಿ ಚಿನ್ನಾಭರಣ, ಬೆಳ್ಳಿ ತೊಟ್ಟಿಲು, ಶಂಖ ಪತ್ತೆಯಾಗಿದ್ದು, ಈ ಬಾರಿ ಇವುಗಳ ಲೆಕ್ಕ ಮಾಡದೇ ಹುಂಡಿಯಲ್ಲೇ ಹಾಕಲಾಗಿದೆ.
ಪಂಚಾಯ್ತಿ ಮುಂದೆ ಕಸ ಸುರಿದ ಗ್ರಾಮಸ್ಥರು:ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಹೀಗಿದ್ದರೂ ಸಹ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಆಡಳಿತ ವರ್ಗದವರು ಸ್ವಚ್ಛತೆಗೆ ಮುಂದಾಗದಿರುವುದರಿಂದ ಬೇಸತ್ತ ರೈತ ಸಂಘದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಕಚೇರಿಗೆ ಕಸ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಕೋಟೆಕೆರೆ ಗ್ರಾಮ ಪಂಚಾಯತಿ ಕಚೇರಿಗೆ ಎತ್ತಿನಗಾಡಿ ಮೂಲಕ ಕಸ ತುಂಬಿಕೊಂಡು ಆಗಮಿಸಿದ ರೈತ ಸಂಘದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಕಚೇರಿಗೆ ಕಸ ಸುರಿದು ಪಿಡಿಓ ಹಾಗೂ ಗ್ರಾಮ ಪಂಚಾಯತಿ ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮಹದೇವ ನಾಯಕ ಮಾತನಾಡಿ, ವರ್ಷದಿಂದಲೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಚರಂಡಿಯಲ್ಲಿ ಹೂಳು ತುಂಬಿ ಗಬ್ಬೆದ್ದು ನಾರುತ್ತಿದೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಆಡಳಿತ ವರ್ಗದವರಿಗೆ ಮನವಿ ಮಾಡಿದ್ದರೂ ಕೂಡ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ಇದೀಗ ಗ್ರಾಮಸ್ಥರೊಡಗೂಡಿ ಗ್ರಾಮ ಪಂಚಾಯತಿ ಕಚೇರಿಗೆ ಕಸ ತಂದು ಸುರಿಯಲಾಗಿದೆ. ಇನ್ನಾದರೂ ಜಡ್ಡು ಗಟ್ಟಿರುವ ಆಡಳಿತ ಚುರುಕಾಗಲಿ ಎಂದು ಆಕ್ರೋಶ ಹೊರಹಾಕಿ, ಗ್ರಾಮ ಪಂಚಾಯತಿ ಸದಸ್ಯರನ್ನು ಇಲ್ಲಿಗೆ ಕರೆಯಿಸಬೇಕು ಎಂದು ಪಿಡಿಒ ಶಾಂತರಾಜು ಅವರನ್ನು ಒತ್ತಾಯಿಸಿದರು.