ಚಾಮರಾಜನಗರ:ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಪ್ರಾಕೃತಿಕ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿರುವ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಕರ್ತವ್ಯದ ವೇಳೆ ಪ್ರಾಣಾಪಾಯ ಸಂಭವಿಸಿದರೆ, ಕಾಡಿನಲ್ಲಿ ಬದುಕುಳಿಯಲು ಏನು ಮಾಡಬೇಕು ಎಂಬುದನ್ನು ಕೆ. ಗುಡಿಯಲ್ಲಿ ತಜ್ಞರು ಹೇಳಿಕೊಟ್ಟಿದ್ದಾರೆ.
ಕೆ. ಗುಡಿ ವಲಯದ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ಷೇತ್ರ ಸಿಬ್ಬಂದಿಗೆ ಸಂಪನ್ಮೂಲ ವ್ಯಕ್ತಿ ವಿನಯ್ ಶಿರ್ಸಿ ವಿಶೇಷ ತರಬೇತಿ ನೀಡಿದ್ದಾರೆ. ಕಳ್ಳಬೇಟೆ ಶಿಬಿರ, ಫಾರೆಸ್ಟ್ ಗಾರ್ಡ್‌ಗಳು, ಡಿಆರ್‌ಎಫ್‌ಒಗಳು ಮತ್ತು ಇತರರಿಗೆ ತಂತ್ರಗಾರಿಕೆಯ ಪಾಠ ಹೇಳಿಕೊಟ್ಟಿದ್ದಾರೆ. ಬೋಧನೆ, ವಿವರಣೆಯ ಜೊತೆಗೆ ಸಮಸ್ಯೆಗಳಿಗೆ ಹೇಗೆ ಪರಿಹಾರ ಕೊಂಡುಕೊಳ್ಳಬೇಕೆಂದು ಪ್ರಾಯೋಗಿಕ ವಿಧಾನದಲ್ಲೂ ವಿವರಿಸಿದ್ದಾರೆ.
ಏನದು ಬದುಕುಳಿಯುವ ತಂತ್ರಗಾರಿಕೆ: ಅರಣ್ಯದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ತಮ್ಮನ್ನು ತಾವು ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕೆಂಬ ತಂತ್ರಗಳನ್ನು ಹೇಳಿಕೊಡಲಾಗಿದೆ. ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕ್ಷೇತ್ರದಲ್ಲಿದ್ದಾಗ ಕಾಡುಪ್ರಾಣಿಗಳು ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚು. ಇದರಿಂದ ತಪ್ಪಿಸಿಕೊಳ್ಳುವ ಮಾರ್ಗೋಪಾಯಗಳೇನು?, ಒಂದು ವೇಳೆ ಕಾಡು ಪ್ರಾಣಿಗಳ ದಾಳಿಯಿಂದ ಗಾಯಗಳಾದರೆ ಅವರನ್ನು ಹೇಗೆ ರಕ್ಷಣೆ ಮಾಡಬೇಕು. ಬೆಟ್ಟಗುಡ್ಡ ಹತ್ತಿದಾಗ ಉಸಿರಾಟದ ತೊಂದರೆ ಅನುಭವಿಸುವವರು, ತಲೆ ಸುತ್ತುಬಂದು ಬೀಳುವವರು ಮತ್ತು ಇತರ ಸಮಸ್ಯೆಗಳಿರುವವರಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆ ವಿಧಾನಗಳ ಬಗ್ಗೆ ತಿಳಿಸಿಕೊಡಲಾಗಿದೆ.