ಚಾಮರಾಜನಗರ:ವರುಣಾ ಬಳಿಕ ಚಾಮರಾಜನಗರದಲ್ಲಿ ಇಂದಿನಿಂದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮತಬೇಟೆ ಆರಂಭಿಸಿದ್ದು, ಚಾಮರಾಜನಗರ ತಾಲೂಕಿನ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿದರು. ಕೂಡ್ಲೂರು ಮಂಟೇಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ ಸೋಮಣ್ಣ, ಆಲೂರು, ಚಂದಕವಾಡಿ, ಅರಕಲವಾಡಿ ಗ್ರಾಮಗಳಲ್ಲಿ ಬಹಿರಂಗ ಸಭೆ ನಡೆಸಿ ತಮಗೆ ಒಂದು ಅವಕಾಶ ಕೊಡುವಂತೆ ಕೈಮುಗಿದು ಪ್ರಾರ್ಥಿಸಿದರು.
ಚಂದಕವಾಡಿ ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿ, ನಾನು ಕೇಳಿಕೊಂಡು ಚಾಮರಾಜನಗರಕ್ಕೆ ಬರಲಿಲ್ಲ, ಮನೆಯಲ್ಲಿ ಮಲಗಿದ್ದರೂ 20 ಸಾವಿರ ಮತಗಳ ಅಂತರದಿಂದ ಗೋವಿಂದರಾಜನಗರದಲ್ಲಿ ಗೆಲ್ಲುತ್ತಿದ್ದೆ. ವರಿಷ್ಠರು ದೂರದೃಷ್ಟಿ ಇಟ್ಟುಕೊಂಡು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ನೀವು ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ, ಹಾಗೇನಾದ್ರು ಕಳುಹಿಸಿದರೇ ನಿಮಗೇ ಲಾಸ್ ಎಂದರು.
ನಾನು ನನ್ನ ಮಗನಿಗೆ ಟಿಕೆಟ್ ಕೇಳಿದೆ, ಆದರೆ ನಿನಗೇ ಇನ್ನೂ ಶಕ್ತಿ ಇದೆ ಎಂದು ಹೇಳಿ ಎರಡು ಟಿಕೆಟ್ ಕೊಟ್ಟರು. ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕಿದ್ದು, ಪಕ್ಷಗಳನ್ನೆಲ್ಲಾ ಬದಿಗಿಟ್ಟು ನನಗೆ ಮತ ಕೊಡಿ, ನಿಮ್ಮ ಮತದ ಮೌಲ್ಯವನ್ನು ಅಭಿವೃದ್ಧಿ ಮೂಲಕ ತೋರಿಸುತ್ತೇನೆ. 13 ರ ತನಕ ಸೋಮಣ್ಣ, ಅದಾದ ಬಳಿಕ ನಾನು ನಿಮ್ಮೆಲ್ಲರ ಸೇವಕ. 24x7 ನಿಮ್ಮ ಸೇವೆ ಮಾಡುತ್ತೇನೆ. 3 ಸಾರಿ ಅವರಿಗೆ ಅವಕಾಶ ಕೊಟ್ಟಿದ್ದೀರಿ, ಒಂದು ಸಾರಿ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಗೋ ಬ್ಯಾಕ್ ಎಂದವರು ಜೊತೆ ಜೊತೆ ಜೊತೆಯಲಿ:ಟಿಕೆಟ್ ಘೋಷಣೆಗೂ ಮುನ್ನ ಗೋ ಬ್ಯಾಕ್ ಸೋಮಣ್ಣ ಎಂದಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಟಿಕೆಟ್ ಘೋಷಣೆಯಾದ ಬಳಿಕ ಅಸಮಾಧಾನಗೊಂಡಿದ್ದ ಪ್ರೊ. ಮಲ್ಲಿಕಾರ್ಜುನಪ್ಪ ಮತ್ತಿತರರು ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದರು. ಸೋಮಣ್ಣ ಎಂದರೆ ಅಭಿವೃದ್ಧಿ, ಸೋಮಣ್ಣ ಎಂದರೆ ಕಾರ್ಯಕ್ಷಮತೆ ಎಂದು ಬ್ಯಾಟಿಂಗ್ ಬೀಸಿದರು.