ವಿ.ಸೋಮಣ್ಣ ಬೆಂಬಲಿಗರಿಂದ ಮನೆ ಹುಡುಕಾಟ ಚಾಮರಾಜನಗರ:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿವಿ.ಸೋಮಣ್ಣ ಅವರ ಸ್ಪರ್ಧೆ ಇನ್ನೂ ನಿಗೂಢವಾಗಿದೆ. ಇದುವರೆಗೂ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಸುಳಿವು ಸಿಕ್ಕಿಲ್ಲ. ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ಹೊಂದಿರುವ ಅವರು ಟಿಕೆಟ್ ಘೋಷಣೆಗೂ ಮುನ್ನವೇ ಇಂದು ಚಾಮರಾಜನಗರಕ್ಕೆ ಭೇಟಿ ಕೊಟ್ಟು ರೈತ ಸಮಾವೇಶದಲ್ಲಿ ಭಾಗಿಯಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, "ಭಗವಂತ, ಮಾದಪ್ಪ ಏನ್ ಮಾಡ್ತಾನೋ ಗೊತ್ತಿಲ್ಲ, ನಾನು ಇಂಥದ್ದೇ ಕ್ಷೇತ್ರ ಬೇಕು ಎಂದು ಕೇಳಿಲ್ಲ. 11 ಚುನಾವಣೆ ಎದುರಿಸಿದ್ದೇನೆ. ರಾಜ್ಯದಲ್ಲಿರುವ 224 ಕ್ಷೇತ್ರವೂ ನನಗಿಷ್ಟ ಎಂದರು. ಚಾಮರಾಜನಗರದಲ್ಲಿ ಸ್ಪರ್ಧೆ ಮಾಡ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾನು ಇಂಥದ್ದೇ ಕ್ಷೇತ್ರ ಬೇಕು ಎಂದು ಕೇಳಿಲ್ಲ" ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ನಡೆದ ಜಿಲ್ಲಾ ರೈತ ಸಮಾವೇಶಕ್ಕೆ ಸೋಮಣ್ಣ ಬರುವ ಮಾಹಿತಿ ಇರಲಿಲ್ಲ. ಸೋಮವಾರ ಸಂಜೆಯ ಹೊತ್ತಿಗೆ ದಿಢೀರ್ ಸಚಿವರ ಹೆಸರು ಸೇರ್ಪಡೆಗೊಂಡು ಅವರು ಭಾಗಿಯಾದರು. ಹೀಗಾಗಿ, ಚಾಮರಾಜನಗರ ಟಿಕೆಟ್ ಪಕ್ಕಾ ಎಂಬ ಮಾತಿಗೆ ಪುಷ್ಠಿ ದೊರೆತಿದೆ.
ಮನೆ ಹುಡುಕುತ್ತಿರುವ ಬೆಂಬಲಿಗರು:ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ಮೂರು-ನಾಲ್ಕು ತಿಂಗಳಲ್ಲಿ ಸೋಮಣ್ಣ ಚಾಮರಾಜನಗರದಲ್ಲಿ ಮನೆ ಮಾಡಿದ್ದರು. ಅದಾದ ಎರಡು ತಿಂಗಳಿಗೇ ಮನೆ ಖಾಲಿ ಮಾಡಿ ಸರ್ಕಾರಿ ಅತಿಥಿ ಗೃಹಗಳಲ್ಲಿ ವಾಸ್ತವ್ಯ ಹೂಡಲು ಆರಂಭಿಸಿದ್ದರು. ಈಗ, ಮತ್ತೆ ತಮ್ಮ ಬೆಂಬಲಿಗರಿಗೆ ಮನೆ ಹುಡುಕುವಂತೆ ತಿಳಿಸಿದ್ದು, ಅನುಯಾಯಿಗಳು ನಗರದಲ್ಲಿ ಮನೆ ಹುಡುಕಾಟ ಆರಂಭಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ:ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವ ವಿ.ಸೋಮಣ್ಣ ನಿನ್ನೆ (ಸೋಮವಾರ) ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ, ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, "ಶಿವಕುಮಾರ ಮಹಾಸ್ವಾಮಿಗಳು ರಾಷ್ಟ್ರ ಕಂಡ ಮಹಾ ತಪಸ್ವಿಗಳು. ಅನ್ನದಾತರು, ವಿದ್ಯಾ ದಾನಿಗಳು. ನಮಗೂ ಪೂಜ್ಯರಿಗೂ ಅವಿನಾಭಾವ ಸಂಬಂಧ ಇತ್ತು. ನಾವು ಯಾವುದೇ ಶುಭ ಕಾರ್ಯ ನಡೆಸಬೇಕೆಂದರೂ ಮೊದಲು ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಅಶೀರ್ವಾದ ಪಡೆಯುತ್ತೇವೆ. ಏಪ್ರಿಲ್ 1ಕ್ಕೆ ಮಠಕ್ಕೆ ಬೇಟಿ ನೀಡಬೇಕಿತ್ತು. ಚುನಾವಣಾ ನಿಂತಿ ಸಹಿತೆ ಜಾರಿ ಇದ್ದ ಕಾರಣ ಬರಲು ಆಗಿರಲಿಲ್ಲ. ಚುಂಚನಗಿರಿ ಹಾಗೂ ಸಿದ್ದಗಂಗಾ ಮಠದ ಶ್ರೀಗಳಿಬ್ಬರು ನನಗೆ ಆರಾಧ್ಯ ದೈವ" ಎಂದು ಹೇಳಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ಸೇರ್ತಾರಾ ಲಕ್ಷ್ಮಣ ಸವದಿ? ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಹೀಗಿದೆ..