ಕರ್ನಾಟಕ

karnataka

ETV Bharat / state

ಹೊಸೂರು TO ದುಬಾರೆ: ಇದು ಕೊನೆಗೂ ಸೆರೆಸಿಕ್ಕ ಕಿರಿಕ್​​ ಆನೆ ಕಥಾ ಪ್ರಸಂಗ! - ಕುಶಾಲನಗರದ ದುಬಾರೆ

ಒಂದು ಚಿಕ್ಕ ದಂತ ಮತ್ತೊಂದು ಚೂಪಾದ ದಂತ ಹೊಂದಿ, 8 ಮಂದಿಯನ್ನು ಬಲಿ ಪಡೆದಿರುವ ಕಿರಿಕ್ ಆನೆ ಕೊನೆಗೂ ಸೆರೆಯಾಗಿದೆ. ಸೆರೆಯಾದ ಆನೆಯನ್ನು ಕುಶಾಲನಗರದ ದುಬಾರೆ ಆನೆ ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ.

ಪುಂಡಾನೆ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

By

Published : Oct 24, 2019, 4:10 PM IST

Updated : Oct 24, 2019, 5:33 PM IST

ಚಾಮರಾಜನಗರ:ತಮಿಳುನಾಡಿನ ಹೊಸೂರಿನಲ್ಲಿ ಪುಂಡಾನೆಯನ್ನು ಸೆರೆ ಹಿಡಿದು, ಮಧುಮಲೈ ಕಾಡಿಗೆ ತಮಿಳುನಾಡಿನ ಅರಣ್ಯಾಧಿಕಾರಿಗಳು ತಂದು ಬಿಟ್ಟಿದ್ದರು. ಅವರು ಮಾಡಿದ್ದ ಎಡವಟ್ಟಿಗೆ ಗುಂಡ್ಲುಪೇಟೆ ಭಾಗದ ಜನರು ಕಳೆದ ಮೂರು ದಿನದಿಂದ ಅನುಭವಿಸಿದ್ದ ಆತಂಕ ಇಂದು ಕೊನೆಗೊಂಡಿದೆ.

ಅಂದಾಜು 15-20 ವರ್ಷದೊಳಗಿನ ಕಟ್ಟುಮಸ್ತಾದ ಒಂಟಿ ಸಲಗ ಇದಾಗಿದ್ದು, ಅದರ ರೋಷಾವೇಷಕ್ಕೆ ಕೃಷ್ಣಗಿರಿ ಜಿಲ್ಲೆಯಲ್ಲಿ ಬರೋಬ್ಬರಿ 8 ಮಂದಿ ಸಾವನ್ನಪ್ಪಿದ್ದರು. ಇನ್ನು ಗುಂಡ್ಲುಪೇಟೆ ತಾಲೂಕಿನಲ್ಲಿ ಇಬ್ಬರು ಮಾರಣಾಂತಿಕವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅರವಳಿಕೆ ನೀಡಿದ ಬಳಿಕವೂ 2 ಬೈಕ್​​ಗಳ ಮೇಲೆ ದಾಳಿ ಮಾಡಿ, ಹಸಿಕಡಲೆ ಹೊಲವನ್ನು ಹೊಸಕಿ ಹಾಕಿ ಕೋಪ ಪ್ರದರ್ಶಿಸಿ ಕೊನೆಗೂ ದಸರಾ ಆನೆಗಳಿಗೆ ಈ ಪುಂಡಾನೆ ಶರಣಾಗಿದೆ.

ನೆರೆ ರಾಜ್ಯದ ಎಡವಟ್ಟು:

ಪುಂಡಾನೆ ಎಂದು ಗೊತ್ತಿದ್ರೂ ಪ್ರಯೋಗ ಮಾಡುವ ಉದ್ದೇಶದಿಂದ ಈ ಆನೆಗೆ ರೇಡಿಯೋ ಕಾಲರ್ ಅಳವಡಿಸಿ ಮಧುಮಲೈಗೆ ತಂದು ಬಿಟ್ಟಿದ್ದರು. ಬಂದ ದಿನವೇ ಕಾರೊಂದರ ಮೇಲೆ ದಾಳಿ ಮಾಡಿ ಬಳಿಕ ಬಂಡೀಪುರದ ಮೂಲಕ ಗುಂಡ್ಲುಪೇಟೆಯತ್ತ ಧಾವಿಸಿ ಬಂದಿದೆ‌. ರೇಡಿಯೋ ಕಾಲರ್​​​ನ ಬ್ಯಾಟರಿ ಕಾರ್ಯನಿರ್ವಹಿಸದೆ, ಆನೆ ಇರುವಿಕೆ ಬಗ್ಗೆ ಮಾಹಿತಿ ಇಲ್ಲದಿದ್ದಾಗಲೂ ಕರ್ನಾಟಕ ಮತ್ತು ಕೇರಳ ಅರಣ್ಯ ಇಲಾಖೆಗೆ ತಮಿಳುನಾಡು ಮಾಹಿತಿ ನೀಡದೇ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಪುಂಡಾನೆ ಸೆರೆಗೆ ಸಹಾಯ ಮಾಡದೇ ನಿರ್ಲಕ್ಷ್ಯ ವಹಿಸಿ ಕೈಚೆಲ್ಲಿದ್ದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ.

ಗುಂಡ್ಲುಪೇಟೆಯ ಶಿವಪುರ ಬಳಿಕ ಹಂಗಳ ತದನಂತರ ಪಾರ್ವತಿ ಬೆಟ್ಟದಲ್ಲಿ ಅಡ್ಡಾಡಿರುವ ಪುಂಡಾನೆ, ಇಂದು ಬನ್ನಿತಾಳಪುರ, ಪಡಗೂರಿನಲ್ಲಿ ಅಟಾಟೋಪ ನಡೆಸುತ್ತಿದ್ದಾಗ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಪುಂಡಾನೆ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

ತಮಿಳುನಾಡು ಮಾಡಿದ್ದು ತಪ್ಪು:

ಪರಿಸರವಾದಿ ಜೋಸೆಫ್ ಹೂವರ್ ದೂರವಾಣಿ ಮೂಲಕ ಈಟಿವಿ ಭಾರತದೊಂದಿಗೆ ಮಾತನಾಡಿ, ಅತಿ ವ್ಯಾಘ್ರವಾಗಿರುವ ಆನೆಯನ್ನು ಕಾಡಿಗೆ ಬಿಟ್ಡಿದ್ದಲ್ಲದೇ ಪರಿಣಿತರಲ್ಲದವರಿಗೆ ರೇಡಿಯೋ ಕಾಲರ್ ಜವಾಬ್ದಾರಿ ನಿರ್ವಹಿಸಿ ಈ ಅನಾಹುತಕ್ಕೆ ಕಾರಣರಾಗಿದ್ದಾರೆ. ಸಂಪರ್ಕ ಕಡಿತಗೊಂಡಾಗಲಾದರೂ ಬೇರೆ ರಾಜ್ಯಗಳಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುಬಾರೆಗೆ ತೆರಳಿದ ಕಿರಿಕ್ ಪಾರ್ಟಿ:

ಕುಶಾಲನಗರದ ದುಬಾರೆ ಆನೆ ಶಿಬಿರಕ್ಕೆ ಪುಂಡಾನೆಯನ್ನು ರವಾನಿಸಿದ್ದು, ಆನೆಯನ್ನು ಪಳಗಿಸಲಾಗುತ್ತದೆ‌. 8 ಮಂದಿಯನ್ನು ಕೊಂದ ಈ ಪುಂಡಾನೆ ಮುಂದೊಂದು ದಿನ ಸೌಮ್ಯ ಸ್ವಭಾವದ ಆನೆಯಾದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಇಬ್ಬರು ಎಸಿಎಫ್, 6 ಮಂದಿ ವಲಯ ಅರಣ್ಯಾಧಿಕಾರಿಗಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯೊಂದಿಗೆ ಸಿಎಫ್ಒ ಕಾರ್ಯಾಚರಣೆಗಿಳಿದು‌ ಯಶಸ್ವಿಯಾಗಿದ್ದು, ಹುಲಿ‌ ಬಳಿಕ ಆತಂಕ ಮೂಡಿಸಿದ್ದ ಆನೆ ಕೊನೆಗೂ ಕೊಡಗಿನ ಲಾರಿ ಹತ್ತಿದೆ.

Last Updated : Oct 24, 2019, 5:33 PM IST

ABOUT THE AUTHOR

...view details