ಕರ್ನಾಟಕ

karnataka

ETV Bharat / state

ಹೊನ್ನೇರು ಇದು ಅನ್ನದಾತರ ತೇರು.. ಯುಗಾದಿ ಸಡಗರದಲ್ಲಿ ರೈತರಿಂದ ಹೊನ್ನೇರು ಸಂಭ್ರಮ

ಯುಗಾದಿ ಆರಂಭವಾಗುತ್ತಿದ್ದಂತೆ ಮಳೆಯೊಂದಿಗೆ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ.‌ ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. ಜಿಲ್ಲೆಯ ಬಹುತೇಕ ಗ್ರಾಮದಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

honneru-farmers-festival-celebrated-at-the-time-of-ugadi
ಹೊನ್ನೇರು ಇದು ಅನ್ನದಾತರ ತೇರು... ಯುಗಾದಿ ಸಡಗರದಲ್ಲಿ ರೈತರಿಂದ ಹೊನ್ನೇರು ಸಂಭ್ರಮ!!

By

Published : Apr 2, 2022, 1:00 PM IST

Updated : Apr 2, 2022, 2:38 PM IST

ಚಾಮರಾಜನಗರ:ಯುಗಾದಿ ಬಂತೆಂದರೆ ಪ್ರಕೃತಿಯಲ್ಲಿ ನವೋಲ್ಲಾಸದ ಸಡಗರ. ಅದೇ ರೀತಿ, ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆಯೂ ಇದಾಗಿದ್ದು, ಜಿಲ್ಲೆಯ ಹಲವೆಡೆ ಸಂಭ್ರಮದಿಂದ ಹೊನ್ನೇರನ್ನು ಕಟ್ಟಿ ಭೂಮಿ ತಾಯಿಯನ್ನು ಪ್ರಾರ್ಥಿಸುವುದು ವಾಡಿಕೆ. ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನೇರನ್ನು ಕಟ್ಟಿ ಹೊಸ ಬಟ್ಟೆಗಳನ್ನು ಧರಿಸಿ ಜಮೀನುಗಳಿಗೆ ಗೊಬ್ಬರ ಸಿಂಪಡಿಸುವ ಮೂಲಕ ಹೊಸ ವರ್ಷದ ಮೊದಲ ದಿನ ಕೃಷಿ ಚಟುವಟಿಕೆ ಆರಂಭಿಸಿ ಬೆಳೆ-ಬೆಲೆ ಚೆನ್ನಾಗಿ ಬಂದು ರೋಗ-ರುಜಿನ ಮಾಯವಾಗಿ ನೆಮ್ಮದಿಯ ಜೀವನ ಸಿಗಲೆಂದು ಬೇಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.

ಏನಿದು ಹೊನ್ನೇರು ? : ಯುಗಾದಿ ಆರಂಭವಾಗುತ್ತಿದ್ದಂತೆ ಮಳೆ ಬರಲಿದ್ದು ಕೃಷಿ ಚಟುವಟಿಕೆಗಳು ಆರಂಭವಾಗುತ್ತದೆ.‌ ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. ಜಿಲ್ಲೆಯ ಬಹುತೇಕ ಗ್ರಾಮದಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಯುಗಾದಿ ಸಡಗರದಲ್ಲಿ ರೈತರಿಂದ ಹೊನ್ನೇರು ಸಂಭ್ರಮ

ಬ್ರಾಹ್ಮೀ ಮಹೂರ್ತದಲ್ಲಿ ಎತ್ತುಗಳನ್ನು ತೊಳೆದು ಕೊಂಬುಗಳಿಗೆ ಹೊಂಬಾಳೆ, ಕೊರಳಿಗೆ ಬಿಳಿಗಣಗಲೆ ಹೂವು, ಮಂಡೆ ಹುರಿ ಕಟ್ಟುತ್ತಾರೆ. ಜೊತೆಗೆ ಎತ್ತಿನಗಾಡಿಯನ್ನು ಬಾಳೆಕಂದು, ಮಾವಿನ ಸೊಪ್ಪಿನಿಂದ ಅಲಂಕರಿಸುತ್ತಾರೆ. ಕೊಟ್ಟಿಗೆ ಗೊಬ್ಬರಕ್ಕೆ ಪೂಜೆ ಸಲ್ಲಿಸಿ ಬಳಿಕ ಆಯಾ ಗ್ರಾಮಗಳ ಗ್ರಾಮದೇವತೆಗೆ ನಮಸ್ಕರಿಸಿ ತಮ್ಮ ತಮ್ಮ ಜಮೀನುಗಳಿಗೆ ಗೊಬ್ಬರವನ್ನು ಸಿಂಪಡಿಸಿ ಬರುತ್ತಾರೆ. ನೂತನ ವರ್ಷದ ಮೊದಲ ದಿನ ರೈತರು ಆ ವರ್ಷದ ಕೃಷಿ ಚಟುವಟಿಕೆ ವಿಧಿವತ್ತಾಗಿ ಅಡಿಯಿಡುವ ಸಂಪ್ರದಾಯ ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು ಇಂದಿಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ವಿಶೇಷ ಆಚರಣೆ ಜೀವಂತವಾಗಿದೆ.

ಹಬ್ಬಕ್ಕೆ ಭೂರಿ ಭೋಜನ: ಗೊಬ್ಬರ ಸಿಂಪಡಿಸಿ ಬಳಿಕ ಮನೆಗೆ ಹಿಂತಿರುಗುವ ರೈತರು ಮನೆಯಲ್ಲಿ ಇಡ್ಲಿ, ಹೋಳಿಗೆ ಹಾಗೂ ಪಾಯಸದ ಭೋಜನ ಸವಿದು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಹೊನ್ನೇರು ನಿಜಕ್ಕೂ ಅನ್ನದಾತನ ರಥವೇ ಆಗಿದ್ದು ಇಡೀ ಕುಟುಂಬದವರು ಹೊಸ ಬಟ್ಟೆ ಧರಿಸಿ ಚಿಣ್ಣರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತಾರೆ. ರೈತನ ಅವಿಭಾಜ್ಯ ಅಂಗವಾದ ಜೋಡೆತ್ತಿಗೆ ಇಂದು ವಿಶೇಷ ಸ್ಥಾನ ಸಿಗಲಿದ್ದು, ಅದಕ್ಕೆ ಮಕ್ಕಳ ಕೈಯಿಂದ ಪೂಜೆ ಸಲ್ಲಿಸುವುದು ವಿಶೇಷ.

ಚಾಮರಾಜನಗರ ಜಿಲ್ಲೆಯ ಹೆಬ್ಬಸೂರು, ಹೊನ್ನೂರು, ಬೊಮ್ಮಲಾಪುರ, ಹಂಗಳ, ರಾಮಸಮುದ್ರ, ಹನೂರು ತಾಲೂಕಿನ ಗ್ರಾಮಗಳಲ್ಲಿ ಎತ್ತಿನಗಾಡಿಗಳನ್ನು ಮಂಗಳವಾದ್ಯದ ಜೊತೆಗೆ ಕರೆದೊಯ್ದು ಜಮೀನಿಗೆ ಗೊಬ್ಬರ ಹಾಕುತ್ತಾರೆ. ಹಿಂದೂ ಸಂಸ್ಕೃತಿಯ ಪ್ರಕಾರ ಹೊಸ ವರ್ಷ ಆರಂಭವಾಗುವುದೇ ಯುಗಾದಿಯಿಂದ. ಹಾಗಾಗಿ ಯುಗಾದಿ ದಿನದಿಂದು ಹೊನ್ನೇರಿನ ಮೂಲಕ ಕೊಟ್ಟಿಗೆ ಗೊಬ್ಬರ ತೆಗೆದುಕೊಂಡು ಹೋಗಿ ಹೊಲಕ್ಕೆ ಸುರಿದು ಸಾಂಕೇತಿಕವಾಗಿ ಕೃಷಿ ಚಟುವಟಿಕೆಗಳನ್ನು ಆರಂಭಿಸುತ್ತೇವೆ. ಕೃಷಿ ಚಟುವಟಿಕೆಯ ಅವಿಭಾಜ್ಯ ಅಂಗವಾದ ಎತ್ತುಗಳು ನಮಗೆ ದೇವರ ಸಮಾನ. ಹಾಗಾಗಿ ಅವುಗಳಿಗೆ ಇಂದು ಪೂಜೆ ಸಲ್ಲಿಸಿ ಹೊನ್ನೇರು ಕಟ್ಟಿ ಒಳ್ಳೆಯ ಮಳೆ ಬೆಳೆ ಆಗಲಿ, ರೈತನ ಶ್ರಮ ಫಲಪ್ರದವಾಗಲಿ ಎಂದು ಪ್ರಾರ್ಥಿಸುತ್ತೇವೆ ಎನ್ನುತ್ತಾರೆ ಹೆಬ್ಬಸೂರು ಗ್ರಾಮದ ರೈತ ಮಂಜೇಶ್.

ಒಟ್ಟಿನಲ್ಲಿ ನೂತನ ವರ್ಷಾರಂಭದಲ್ಲಿ ರೈತರಿಂದ ಅರ್ಥಪೂರ್ಣ ಆಚರಣೆಯೊಂದು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಸಂಕ್ರಾಂತಿ ಸುಗ್ಗಿ ಬಿಟ್ಟರೇ ಇಡೀ ರೈತ ಸಮುದಾಯ ಸಡಗರದಿಂದ ಪಾಲ್ಗೊಳ್ಳುವ ಹಬ್ಬವೆಂದರೆ ಅದು ಯುಗಾದಿಯಾಗಿದೆ.

ಓದಿ :ರಾಮ ದೇಗುಲದ ಹೊರಗೆ ಅನ್ಯ ಕೋಮಿನವರಿಂದ ಪ್ರಾರ್ಥನೆ.. ಎರಡು ಗುಂಪುಗಳ ನಡುವೆ ಘರ್ಷಣೆ

Last Updated : Apr 2, 2022, 2:38 PM IST

ABOUT THE AUTHOR

...view details