ಗುಂಡ್ಲುಪೇಟೆ: ವಾರದಿಂದ ಬೀಸುತ್ತಿರುವ ಬಿರುಗಾಳಿಗೆ ತಾಲೂಕಿನ ಭೀಮನಬೀಡು ಗ್ರಾಮದ ನಾಗರಾಜ ಸ್ವಾಮಿ ಮತ್ತು ಜುಬೇದಾ ಉನ್ನಿಸ್ ಎಂಬುವರ ಮನೆಯ ಗೋಡೆ ಕುಸಿದಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಮಾಹಿತಿ ತಿಳಿಸಲಾಗಿದೆ.
ತೀರ ಬಡವರಾಗಿರುವ ಅವರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಸಹಾಯ ಮಾಡಬೇಕು ಎಂದು ಗ್ರಾಮದ ಮುಖಂಡ ಮಂಜುನಾಥ್ ಆಗ್ರಹಿಸಿದ್ದಾರೆ.
ಕೇರಳ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಗಡಿ ಪ್ರದೇಶದ ಗ್ರಾಮಗಳಲ್ಲಿ ತುಂತುರು ಮಳೆ ಬೀಳುತ್ತಲೇ ಇದೆ. ಜೊತೆಗೆ ಬಿರುಗಾಳಿ ಬೀಸುತ್ತಿರುವ ಕಾರಣ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಹಲವು ಗ್ರಾಮಗಳಲ್ಲಿ ಮರಗಳು ಬಿದ್ದಿದೆ.
ಜಮೀನಿನಲ್ಲಿ ಬೆಳೆದಿರುವ ಬಾಳೆ ನೆಲಕಚ್ಚಿದೆ. ಹಾಗಲಕಾಯಿ ಗಿಡಗಳಲ್ಲಿ ಹೂ ಉದುರಿ ಹೋಗಿದೆ. ಕೊಯ್ಲಿಗೆ ಬಂದಿರುವ ಬೆಳೆಗಳನ್ನು ಬೀಸುವ ಗಾಳಿಯಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ ಎಂದು ರೈತ ಪ್ರಕಾಶ್ ತಿಳಿಸಿದರು.