ಕೊಳ್ಳೇಗಾಲ: ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂ. ಮೌಲ್ಯದ ಸಾಮಾಗ್ರಿಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ಘಟನೆ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಸತ್ತೇಗಾಲ ಗ್ರಾಮದ ಸತೀಶ್ ಎಂಬುವವರ ಮನೆ ಶಾರ್ಟ್ ಸರ್ಕ್ಯೂಟ್ಗೆ ಸುಟ್ಟು ಭಸ್ಮವಾಗಿದೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ 10.30ರ ಸಮಯದಲ್ಲಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸತೀಶ್, ಪತ್ನಿ ಸವಿತಾ ಹಾಗೂ ಮಗಳಾದ ಸಿಂಚನ ಗಾಬರಿಯಿಂದ ಹೊರಗೆ ಬಂದಿದ್ದಾರೆ. ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾಗಿ ಮನೆಯ ಸಾಮಾಗ್ರಿಗಳು, ಬೆಲೆ ಬಾಳುವ ಸೀರೆಗಳು, 250 ಗ್ರಾಂ ಚಿನ್ನ ಸೇರಿದಂತೆ ಮನೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸಂಗ್ರಹಿಸಿಟ್ಟಿದ್ದ ಅಂಗಡಿಯ ದಿನಸಿಗಳು ಸುಟ್ಟು ಕರಕಲಾಗಿವೆ. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಬೆಂಕಿಯ ತೀವ್ರತೆಗೆ ಮನೆಯ ಮಾಲೀಕ ಸತೀಶ್ ಮುಖಕ್ಕೆ ಗಾಯವಾಗಿದೆ. ಅವಘಡದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.