ಚಾಮರಾಜನಗರ: ಪ್ರಸಿದ್ಧ ಪ್ರವಾಸಿತಾಣ, 'ಭಾರತದ ನಯಾಗರ' ಎಂದು ಕರೆಯುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ಕಣ್ಮರೆಯಾಗಿದೆ. ಮಳೆ ಆರ್ಭಟದಿಂದ ಜಲಪಾತದ ಮೇಲೆ ನೀರು ಹರಿಯುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವುದು ಜತೆಗೆ ಕಾವೇರಿ ಹೊರಹರಿವು ಹೆಚ್ಚಾಗಿರುವ ಹಿನ್ನೆಲೆ ಜಲಪಾತ ಸಂಪೂರ್ಣ ಮುಳುಗಡೆಯಾಗಿದೆ. ಹೊಗೆನಕಲ್ನಲ್ಲಿ ಧುಮ್ಮಿಕ್ಕುವ ದೃಶ್ಯ ಬದಲಾಗಿ ಎಲ್ಲಿ ನೋಡಿದರೂ ಕಾವೇರಿ ಹರಿದಾಟವೇ ಕಾಣುತ್ತಿದೆ.
ತಮಿಳುನಾಡು ಭಾಗದಲ್ಲಿ ಜಲಪಾತ ವೀಕ್ಷಣೆ ಮಾಡುವ ಜಾಗ ಹಾಗೂ ನೀರಾಟ ಆಡುವ ಸ್ಥಳ ಜಲಾವೃತವಾಗಿದ್ದು, ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕರ್ನಾಟಕ ಭಾಗದಲ್ಲಿಯೂ ಹೆಚ್ಚು ನೀರು ಹರಿಯುತ್ತಿದೆ. ಇದರಿಂದ ನದಿ ಅಂಚಿನ ಆಲಂಬಾಡಿ, ಜಂಬಲ್‌ಪಟ್ಟಿ ಹಾಗೂ ಆತೂರು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.
ಮಳೆ ಆರ್ಭಟ..ಹೊಗೆನಕಲ್ ಜಲಪಾತ ಮುಳುಗಡೆ.. ಹೊಗೆನಕಲ್, ಗೋಪಿನಾಥಂಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ನೀರಿನಿಂದ ಆವೃತಗೊಂಡಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ.
ಇದನ್ನೂ ಓದಿ:ಚಾಮರಾಜನಗರದಲ್ಲಿ ಮುಂದಿನ ಎರಡು ದಿನ ಶಾಲೆಗಳಿಗೆ ರಜೆ ಘೋಷಣೆ