ಚಾಮರಾಜನಗರ: ಸತತ 5 ಬಾರಿ ವಿವಿಧ ಪಕ್ಷಗಳಿಂದ ಆಯ್ಕೆಯಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ಲೋಕ ಚುನಾವಣೆಯಲ್ಲಿ ತಾವಿದ್ದ ಪಕ್ಷಕ್ಕೆ ಗೆಲುವು ತಂದು ಕೊಡುತ್ತಿದ್ದರು.
ಹೌದು, ೧೯೯೯ ರಿಂದ ಹೆಚ್.ಎಸ್.ಮಹದೇವಪ್ರಸಾದ್ ಬೆಂಬಲಿತ ಪಕ್ಷವೇ ಲೋಕ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿತ್ತು. ೧೯೯೬, ೧೯೯೮, ೧೯೯೯, ೨೦೦೪, ೨೦೦೯, ೨೦೧೪ರ ಚುನಾವಣೆಯಲ್ಲಿ ಹೆಚ್ಎಸ್ಎಂ ಬೆಂಬಲಿತ ಅಭ್ಯರ್ಥಿಗಳೇ ವಿವಿಧ ಪಕ್ಷಗಳಿಂದ ಆಯ್ಕೆಯಾಗಿದ್ದಾರೆ.
೧೯೯೬ರಲ್ಲಿ ಜನತಾ ದಳದ ಅಭ್ಯರ್ಥಿ ಎ.ಸಿದ್ದರಾಜು ಅವರನ್ನು ಕಣಕ್ಕಿಳಿಸಿ ವಿ.ಶ್ರೀನಿವಾಸಪ್ರಸಾದ್ ಅವರನ್ನು ಸೋಲಿಸಿದರು. ೧೯೯೮ರ ಮಧ್ಯಂತರ ಚುನಾವಣೆಯಲ್ಲೂ ಎ.ಸಿದ್ದರಾಜು ವಿ.ಶ್ರೀ ಅವರನ್ನು ಮಣಿಸಿದರು. ಬಳಿಕ, ಸಂಯುಕ್ತ ದಳ ಸೇರಿದ ಹೆಚ್ಎಸ್ಎಂ ಜೆಡಿಯು ಅಭ್ಯರ್ಥಿ ವಿ.ಶ್ರೀ ಪರವಾಗಿ ನಿಂತು ಕಾಂಗ್ರೆಸ್ನಿಂದ ನಿಂತಿದ್ದ ಎ.ಸಿದ್ದರಾಜುರನ್ನು ಮಣಿಸಿದರು. ಬಳಿಕ ಜೆಡಿಯು ತೊರೆದು ಜೆಡಿಎಸ್ ಸೇರಿದ್ದ ಅವರು ೨೦೦೪ರ ತಮ್ಮ ಪಕ್ಷದ ಅಭ್ಯರ್ಥಿ ಕಾಗಲವಾಡಿ ಎಂ.ಶಿವಣ್ಣರನ್ನು ಗೆಲ್ಲಿಸಿಕೊಂಡು ಬಂದರು.
ಬಳಿಕ, ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಹೆಚ್ಎಸ್ಎಂ ೨೦೦೯ ಮತ್ತು ೨೦೧೪ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಆರ್.ಧ್ರುವನಾರಾಯಣರನ್ನು ೨ ಬಾರಿ ಲೋಕ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದ್ದರು.
ಜಿಲ್ಲಾ ರಾಜಕಾರಣದಲ್ಲಿ ಕ್ಯಾಪ್ಟನ್ನಂತಿದ್ದ ಹೆಚ್.ಎಸ್.ಮಹದೇವಪ್ರಸಾದ್ ೨೦೧೭ರಲ್ಲಿ ನಿಧನರಾಗಿದ್ದು, ಅವರಿಲ್ಲದ ಈ ಹೊತ್ತಿನಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.