ಚಾಮರಾಜನಗರ: ಜನಸ್ನೇಹಿ ಆಡಳಿತ, ದಿಢೀರ್ ಭೇಟಿಗಳು, ರೈತರೊಂದಿಗೆ ಆಪ್ತ ಮಾತುಕತೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಚಾಮರಾಜನಗರ ಡಿಸಿ ಇಂದು ಪದವಿ ವಿಧ್ಯಾರ್ಥಿಗಳಿಗೆ ಇತಿಹಾಸ ಬೋಧಿಸಿ ಗಮನ ಸೆಳೆದಿದ್ದಾರೆ.
ತಮ್ಮ ಕರ್ತವ್ಯದ ನಡುವೆಯೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಬಿಡುವು ಮಾಡಿಕೊಂಡು, ತಾವು ಬೋಧನಾ ವೃತ್ತಿ ಆರಂಭಿಸಿದ ಚಾಮರಾಜನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳಿಗೆ ಇತಿಹಾಸ ಪಾಠ ಬೋಧಿಸಿದರು.
ಚಾಮರಾಜನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಕೋರಿಕೆ ಮೇರೆಗೆ ತಾವು ಅಧ್ಯಾಪಕರಾಗಿ ಕಾರ್ಯನಿವರ್ಹಿಸಿದ್ದ ಕಾಲೇಜಿನ ಮೇಲಿನ ಕಾಳಜಿಯಿಂದ ಇಂದು ಬೆಳಗ್ಗೆ 9ಕ್ಕೆ ಬಿಡುವು ಮಾಡಿಕೊಂಡು ಕಾಲೇಜಿಗೆ ಆಗಮಿಸಿ, ವಿದ್ಯಾರ್ಥಿಗಳಿಗೆ ಮೈಸೂರು ಒಡೆಯರ್ ಇತಿಹಾಸ ಕುರಿತು ಪಾಠ ಬೋಧಿಸಿದರು.
ಡಿಸಿ ತಮ್ಮ ಕಾಲೇಜಿಗೆ ಬಂದಿದ್ದಾರೆ ಎಂದು ಭಯ ಮತ್ತು ಮುಜುಗರಕ್ಕೊಳಗಾಗಿದ್ದ ವಿದ್ಯಾರ್ಥಿಗಳಿಗೆ ನಾನು ಜಿಲ್ಲಾಧಿಕಾರಿ ಎನ್ನುವುದನ್ನು ಮರೆತು ಬಿಡಿ. ನಾನು ನಿಮ್ಮ ಜೊತೆ ಕೆಲವು ವಿಚಾರ ಹಂಚಿಕೊಳ್ಳಲು ಬಂದಿರುವ ಮೇಷ್ಟ್ರು ಎಂದು ತಿಳಿದುಕೊಳ್ಳಿ ಎಂದು ಧೈರ್ಯ ತುಂಬಿ ಪಾಠ ಆರಂಭಿಸಿದರು.
ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮೈಸೂರು ಒಡೆಯರ ಇತಿಹಾಸ ಕುರಿತು ಪಾಠ ಆರಂಭಿಸುತ್ತಿದ್ದಂತೆ ವಿದ್ಯಾರ್ಥಿಗಳು ತಮ್ಮ ಗಮನವನ್ನು ಅತ್ತಿತ್ತ ಹರಿಸದೇ ಪಾಠದತ್ತ ಕೇಂದ್ರೀಕರಿಸಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ 1992 ರಿಂದ 2001ರವರೆಗೆ ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಷಯದ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.