ಚಾಮರಾಜನಗರ: ಹಿಜಾಬ್ ಬೇಕು ಎನ್ನುವ ಕೂಗು ಈಗ ಚಾಮರಾಜನಗರದಲ್ಲೂ ಆರಂಭವಾಗಿದ್ದು, ನೂರಾರು ಮುಸ್ಲಿಂ ಮಹಿಳೆಯರು ಇಂದು ನಗರದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಶಿರವಸ್ತ್ರ ತಮ್ಮ ಮೂಲಭೂತ ಹಕ್ಕೆಂದು ಪ್ರತಿಪಾದಿಸಿದರು.
ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಣೆ ವಿರೋಧಿಸಿ ನೂರಾರು ಮಂದಿ ಮಹಿಳೆಯರು, ಮುಸ್ಲಿಂ ವಿದ್ಯಾರ್ಥಿನಿಯರು ಸಂಜೆ ದಿಢೀರ್ ನಗರದ ಲಾರಿ ನಿಲ್ದಾಣದಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ಹಿಜಾಬ್ ತಮ್ಮ ಮೂಲ ಹಕ್ಕು, ಬೇರೆಯವರು ಬಿಂದಿ, ಬಳೆಯಂತೆ ತಮ್ಮ ಮಕ್ಕಳು ಹಿಜಾಬ್ ಧರಿಸುತ್ತಾರೆ, ಹಿಜಾಬ್ ಸಮವಸ್ತ್ರದ ಒಂದು ಭಾಗವಾಗಿಯೇ ಇದೆ, ಇದು ತಮ್ಮಗಳ ಹಕ್ಕೆಂದು ಪಾಲಕರು ಆಗ್ರಹಿಸಿದರು.
ಇಸ್ಲಾಂ ಧರ್ಮದ ಧಾರ್ಮಿಕ ಮೂಲ ತತ್ತ್ವಗಳ ಅನುಗುಣವಾಗಿ ಹೆಣ್ಣು ಶಿರವಸ್ತ್ರ ಧರಿಸುವುದು ಕಡ್ಡಾಯಗೊಳಿಸಿದೆ. ಆದುದರಿಂದ ಒಂದು ವೇಳೆ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ಶಾಲನ್ನು ಬಳಸಿ ಶಿರವಸ್ತ್ರ ಧರಿಸಲು ಅವಕಾಶ ನೀಡಬೇಕು.