ಚಾಮರಾಜನಗರ: ಬಹುಜನ ಸಮಾಜವಾದಿ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದ್ದ ಕಾರಣಕ್ಕಾಗಿ ಅನರ್ಹಗೊಂಡ ಕೊಳ್ಳೇಗಾಲ ನಗರಸಭೆಯ ಏಳು ಮಂದಿ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಹೈಕೋರ್ಟ್ನಲ್ಲಿ ವಜಾಗೊಂಡಿದೆ. ತಮ್ಮನ್ನು ನಗರಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ಜಿಲ್ಲಾಧಿಕಾರಿ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕೊಳ್ಳೇಗಾಲ ನಗರಸಭೆ ಸದಸ್ಯರಾಗಿದ್ದ ಪವಿತ್ರಾ ಹಾಗೂ ಇತರ ಆರು ಮಂದಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠವು ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿತ್ತು.
ಆದರೆ, ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಸುದೀರ್ಘ ವಿಚಾರಣೆಯ ಬಳಿಕ ಹೈಕೋರ್ಟ್ ವಿಭಾಗೀಯ ಪೀಠವು ಮೇಲ್ಮನವಿ ವಜಾಗೊಳಿಸಿ, ಜಿಲ್ಲಾಧಿಕಾರಿ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದಿದೆ.
ರಾಜಕೀಯ ಜಿದ್ದಾಜಿದ್ದಿ:ಬಿಎಸ್ಪಿಯಿಂದ ಶಾಸಕ ಎನ್.ಮಹೇಶ್ ಉಚ್ಚಾಟನೆಗೊಂಡ ಬಳಿಕ ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ 'ಆನೆ' ಗುರುತಿನಿಂದ ಗೆದ್ದಿದ್ದ 9 ಸದಸ್ಯರಲ್ಲಿ ಏಳು ಮಂದಿ ಸದಸ್ಯರು ಶಾಸಕ ಮಹೇಶ್ ಬಣ ಸೇರಿಕೊಂಡಿದ್ದರು. ಬಳಿಕ 2020ರ ಅ.29ರಂದು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಎಸ್ಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು.