ಚಾಮರಾಜನಗರ: ಮರಳುರಾಶಿ ನಡುವೆ ದ್ವಿಚಕ್ರ ವಾಹನ ಸವಾರರು ನಿರ್ಭೀತರಾಗಿ ಚಾಲನೆ ಮಾಡಲಾಗದೆ ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ದುಸ್ಥಿತಿ ಚಾಮರಾಜನಗರ-ಸತ್ಯಮಂಗಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿದೆ.
ಮೊದಲೇ ಸಮತಟ್ಟಾಗಿರದ ಈ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಸಂಗ್ರಹವಾಗಿರುವ ಮರಳು ರಾಶಿ ವಾಹನ ಸವಾರರಿಗೆ ಮತ್ತೊಂದು ಫಜೀತಿ ಉಂಟು ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಮರಳುಮಯ....ವಾಹನ ಸವಾರರಿಗೆ ನಿತ್ಯ ಜೀವಭಯ ಮಳೆ ಬಂದಾಗ ಚರಂಡಿ ನೀರು ತುಂಬಿ ಹರಿಯುವುದರಿಂದ ಈ ಮರಳಿನ ರಾಶಿ ನಿರ್ಮಾಣಗೊಂಡಿದ್ದು, ರಸ್ತೆಯ ಅರ್ಧಭಾಗದಲ್ಲಿ ಮರಳು ಸಂಗ್ರಹಣೆಯಾಗಿದೆ. ಎಡಗಡೆಗೆ ತೆರಳಿದರೆ ಮರಳಿನಲ್ಲಿ ಬೈಕ್ ನಿಯಂತ್ರಣ ತಪ್ಪುವ ಭಯ, ಬಲಗಡೆಗೆ ತಿರುಗಿದರೆ ಹಿಂದಿನಿಂದ ಬರುವ ಸರಕು ತುಂಬಿದ ಲಾರಿಗಳ ಭಯ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ವಾಹನ ಸವಾರರು ಸಿಲುಕಿದ್ದಾರೆ.
ನಗರಸಭೆ, ಪೊಲೀಸ್ ಇಲಾಖೆಗೆ ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದೇ ನಿತ್ಯ ಪ್ರಾಣಭಯದಿಂದಲೇ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಈಗಾಗಲೇ, ಮರಳಿನ ಮೇಲೆ ಬೈಕ್ ಚಲಾಯಿಸಿ ನಿಯಂತ್ರಣ ಸಿಗದೇ ನಾಲ್ಕಾರು ಮಂದಿ ಗಾಯಗೊಂಡಿದ್ದು ಇತ್ತೀಚೆಗಷ್ಟೇ ಓರ್ವ ಬೈಕ್ ಸವಾರ ಪ್ರಾಣ ಕಳೆದುಕೊಂಡಿದ್ದಾನೆ. ಹಾಗಾಗಿ ಶೀಘ್ರವೇ ಈ ರಸ್ತೆಯ ಮೇಲಿನ ಮರಳು ತೆರವುಗೊಳಿಸಿ ಚರಂಡಿ ನಿರ್ಮಾಣ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್ ಮಾಡುತ್ತೇವೆಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಓದಿ;ಸಿದ್ದರಾಮಯ್ಯ ಸಣ್ಣತನ ಬಿಟ್ಟು ಸದನದಲ್ಲಿ ಚರ್ಚಿಸಲಿ; ಸದಾನಂದ ಗೌಡ
ತೆರೆದ ಮ್ಯಾನ್ ಹೋಲ್ಗಳು, ಅವೈಜ್ಞಾನಿಕ ರಸ್ತೆ ಕಾಮಗಾರಿಗಳ ನಡುವೆ ಈ ಮರಳಿನ ಹಾದಿ ವಾಹನ ಸವಾರರಿಗೆ ನಿತ್ಯ ಸಂಕಟವಾಗಿದ್ದು, ಇನ್ನಾದರೂ ಅಧಿಕಾರಿಗಳು ಕ್ರಮ ವಹಿಸಬೇಕಿದೆ.