ಚಾಮರಾಜನಗರ: ಹತ್ತಾರು ವರ್ಷಗಳ ಬಳಿಕ ಗಡಿ ಜಿಲ್ಲೆಯ ಕೆರೆ ಕಟ್ಟೆಗಳು ಕೋಡಿ ಬೀಳುತ್ತಿದ್ದು ನೀರು ಕಾಣದ ಸ್ಥಳಗಳಲ್ಲೆಲ್ಲ ನಿಂತು ರಾಡಿ ಎಬ್ಬಿಸಿದೆ. ದಶಕದ ಮಹಾಮಳೆಗೆ ಕೋಡಿ ಬಿದ್ದಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೆ, ಮತ್ತದೇ ಮಳೆಯಿಂದ ಬೆಳೆ ಹಾನಿಯಾಗಿ ಕಂಗಾಲಾಗುವಂತೆಯೂ ಮಾಡಿದೆ.
ಭಾರಿ ಮಳೆಯಿಂದ ಯಳಂದೂರು ತಾಲೂಕಿನ ಯರಗಂಬಳ್ಳಿ ಕೆರೆ ಭರ್ತಿಯಾಗಿ ಏರಿ ಒಡೆದಿದೆ. ಜಮೀನುಗಳಿಗೆ ನೀರು ನುಗ್ಗಿದ ರಭಸಕ್ಕೆ ನಾಟಿ ಮಾಡಿದ ಭತ್ತ, ರಾಗಿ, ಕಬ್ಬು ಹಾಗೂ ತೆಂಗಿನ ಸಸಿಗಳು ನಾಶವಾಗಿವೆ. ವ್ಯವಸಾಯಕ್ಕೆ ಖರ್ಚು ಮಾಡಿದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಚಾಮರಾಜನಗರ: ಹತ್ತಾರು ವರ್ಷಗಳ ಬಳಿಕ ಕೋಡಿ ಬಿದ್ದ ಕೆರೆ ಕಟ್ಟೆಗಳು , ಜನರ ಬದುಕು ಮೂರಾಬಟ್ಟೆ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ಸಮೀಪದ ಗುಂಡಾಲ್ ಜಲಾಶಯ ಭರ್ತಿಯಾಗಿದೆ. ಎರಡು ದಿನಗಳಿಂದ ಕೋಡಿ ಬಿದ್ದು ಹರಿಯುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಇದೇ ರೀತಿ ಸಂಪೂರ್ಣ ಭರ್ತಿಯಾಗಿ ಕೋಡಿ ಹರಿದಿತ್ತು.
ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಮರಗದಕೆರೆ 16 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದಿದೆ. 22 ವರ್ಷಗಳ ಬಳಿಕ ಮರಿಯಾಲ ಸಮೀಪದ ಮಾಲೆಗೆರೆ, ಎಚ್.ಮೂಕಳ್ಳಿ ಗ್ರಾಮದ ಕೆರೆ, 30 ವರ್ಷಗಳ ಬಳಿಕ ಅಮ್ಮನಪುರ ಕೆರೆ, 20 ವರ್ಷಗಳ ಬಳಿಕ ಬಿಳಿಗಿರಿರಂಗನ ಬೆಟ್ಟ ತಪ್ಪಲಿನ ಕೃಷ್ಣಯ್ಯನಕಟ್ಟೆ ತುಂಬಿ ಕೋಡಿ ಬಿದ್ದಿದೆ.
ಇದನ್ನೂ ಓದಿ:ಮೈದುಂಬಿದ ಹೊಗೆನಕಲ್ ಜಲಪಾತ - ಪ್ರವಾಸಿಗರಿಗೆ ನಿರ್ಬಂಧ
ಚಾಮರಾಜನಗರದ ಐತಿಹಾಸಿಕ ದೊಡ್ಡರಸನ ಕೊಳ ಪೂರ್ಣವಾಗಿ ಭರ್ತಿಯಾಗುವುದಕ್ಕೆ ಇನ್ನು ಒಂದು ಮೆಟ್ಟಿಲಷ್ಟೇ ಬಾಕಿ ಇದೆ. ಐದು ದಿನಗಳಿಂದ ರಾತ್ರಿ ಹೊತ್ತು ಸುರಿಯುತ್ತಿರುವ ಮಳೆಯಿಂದಾಗಿ ಕೊಳಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಕೊಳದ ಮೇಲ್ಭಾಗದಲ್ಲಿರುವ ಗಣಪತಿ ದೇವಾಲಯದವರೆಗೂ ನೀರು ಬಂದಿದೆ. ಇತ್ತ, ಈ ಹಿಂದೆ 1972ರ ಡಿಸೆಂಬರ್ 6ರಂದು ಚಿಕ್ಕ ಹೊಳೆ ತುಂಬಿ ಏರಿ ಒಡೆದು ಹೋಗಿತ್ತು. ಇದೀಗ 50 ವರ್ಷಗಳ ನಂತರ ಕೊಳ ಭರ್ತಿಯಾಗುತ್ತಿದೆ.
ಜನರ ಬದುಕು ಮೂರಾಬಟ್ಟೆ: ಮಹಾಮಳೆಗೆ ಅಕ್ಷರಶಃ ಜನರ ಬದುಕು ಮೂರಾಬಟ್ಟೆಯಾಗಿದೆ. ಹೆಬ್ಬಸೂರಿನಲ್ಲಿ ಸಾವಿರಾರು ತೆಂಗಿನಕಾಯಿ ಕೊಚ್ಚಿ ಹೋಗಿದೆ. ಕಳೆದ ಒಂದು ವಾರದ ಮಳೆಗೆ 107 ಮನೆಗಳು ಕುಸಿದು ಬಿದ್ದಿವೆ. ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಬೆಳೆ, 60ಕ್ಕೂ ಹೆಚ್ಚು ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು ರೈತರು ಕಂಗಲಾಗಿದ್ದಾರೆ.
ಈ ಮೂರು ದಿನದ ಮಳೆಗೆ 23 ಅಂಗನವಾಡಿಗಳು, 57 ಶಾಲೆಗಳು, ಒಂದು ಕೆರೆ, ಒಂದು ಟಿಸಿ, 19 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಾಂಬಳ್ಳಿ ಪೊಲೀಸ್ ಠಾಣೆ ಜಲಾವೃತ.. ಅಪಾಯಕ್ಕೆ ಸಿಲುಕಿದ್ದ ಅಧಿಕಾರಿಗಳ ರಕ್ಷಣೆ