ಚಾಮರಾಜನಗರ :ಜಿಲ್ಲೆಯಲ್ಲಿ ಹಿಂಗಾರು ಮಳೆ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿದೆ. ಇನ್ನೆರಡು ದಿನ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಮುಂದುವರೆಯಲಿದೆ ಎಂದು ಹವಾಮಾನ ತಜ್ಞ ರಜತ್ ಮಾಹಿತಿ ನೀಡಿದ್ದಾರೆ.
ಚಾಮರಾಜನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ.. ನವೆಂಬರ್ 1 ರಿಂದ 14ರವರೆಗಿನ ಮಳೆ ಪ್ರಮಾಣ ಕುರಿತು ರಜತ್ ಮಾಹಿತಿ ನೀಡಿದ್ದಾರೆ. ಚಾಮರಾಜನಗರದಲ್ಲಿ 128.4 mm, ಗುಂಡ್ಲುಪೇಟೆಯಲ್ಲಿ 93.3 mm, ಯಳಂದೂರಿನಲ್ಲಿ139.7 mm, ಕೊಳ್ಳೇಗಾಲದಲ್ಲಿ 159.7 mm ಹಾಗೂ ಹನೂರಿನಲ್ಲಿ 148 mm ಮಳೆಯಾಗಿದೆ.
ಚಾಮರಾಜನಗರದಲ್ಲಿ ವಾಡಿಕೆಗಿಂತ ಶೇ.210ರಷ್ಟು, ಗುಂಡ್ಲುಪೇಟೆಯಲ್ಲಿ 58%, ಯಳಂದೂರಿನಲ್ಲಿ 213%, ಕೊಳ್ಳೇಗಾಲದಲ್ಲಿ 271% ಹಾಗೂ ಹನೂರಿನಲ್ಲಿ 198%ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ತಿಳಿಸಿದ್ದಾರೆ.
15 ಮತ್ತು 16ರ ತನಕವೂ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಮುಂದುವರೆಯಲಿದೆ. 17 ರಿಂದ 24ರವರೆಗೆ ಮಳೆ ಕಡಿಮೆಯಾಗುವ ಸಂಭವವಿದೆ ಎಂದು ಅವರು ಹೇಳಿದ್ದಾರೆ. ಹಿಂಗಾರು ಮಳೆ ಭರ್ಜರಿಯಾಗಿ ಸುರಿಯುತ್ತಿದೆ. ಜಿಲ್ಲೆಯ ಬಹುತೇಕ ಕೆರೆ-ಕಟ್ಟೆ, ಜಲಾಶಯ ಮೈದುಂಬುತ್ತಿವೆ. ಜೊತೆಗೆ ನಿತ್ಯ ಜನರು ಮಳೆಗೆ ಸಿಲುಕಿ ಫಜೀತಿ ಅನುಭವಿಸುತ್ತಿದ್ದಾರೆ.
ಒಳಚರಂಡಿ ವ್ಯವಸ್ಥೆ ಇಲ್ಲದೇ ಹೊಳೆಯಂತಾಗಿದ್ದ ಬಿ.ರಾಚಯ್ಯ ಜೋಡಿ ರಸ್ತೆ ರೀತಿಯೇ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿಗಳು ಕೆರೆಯಂತಾಗಿ ಜನರು ಅರ್ಧ ತಾಸು ದಿಕ್ಕು ತೋಚದಂತಾಗಿ ಪಡಿಪಾಟಲು ಪಟ್ಟ ಪ್ರಸಂಗ ನಡೆಯಿತು. ಸುರಿದ ಜೋರು ಮಳೆಗೆ ಬೀದಿಬದಿ ವ್ಯಾಪಾರಿಗಳಂತೂ ತೀವ್ರ ಸಂಕಷ್ಟಕ್ಕೆ ಸಿಲುಕಿ, ವ್ಯಾಪಾರ-ವ್ಯವಹಾರ ನಷ್ಟ ಅನುಭವಿಸಿದರು.
ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತಿದ್ದರಿಂದ ಬೈಕ್ ಸವಾರರು ಸಂಚರಿಸಲು ಪರದಾಡಿದರು. ಒಂದು ದಿನ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಜಿಲ್ಲಾದ್ಯಂತ ಅಬ್ಬರಿಸಿರುವುದು ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ.
ರೈತರಲ್ಲಿ ಆತಂಕ :ಮುಂಗಾರಿನಲ್ಲಿ ಬಿತ್ತನೆ ಮಾಡಿ ಕಟಾವಿಗೆ ಬಂದಿರುವ ಹಲವು ಬೆಳೆಗಳಿಗೆ ಈ ಜೋರು ಮಳೆ ಕಂಟಕವಾಗಿ ಪರಿಣಮಿಸಿದೆ. ರಾಗಿ, ನೆಲಗಡಲೆ, ಸಾಮೆ, ಮೆಕ್ಕೆಜೋಳ ಬೆಳೆಗಳಿಗೆ ಹಿಂಗಾರು ಮಳೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ.