ಚಾಮರಾಜನಗರ :ಗುರುವಾರ ತಡರಾತ್ರಿಯಿಂದ ಸುರಿದ ಜೋರು ಮಳೆಗೆ ಜಿಲ್ಲಾದ್ಯಂತ ಅವಾಂತರವೇ ಸೃಷ್ಟಿಯಾಗಿದೆ. ಕಾಲೋನಿಗಳಿಗೆ, ತೋಟದ ಮನೆಗಳಿಗೆ ನೀರು ನುಗ್ಗಿದ್ದರಿಂದಾಗಿ ಜನ ಪರದಾಡುವಂತಾಗಿದೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಪೊನ್ನಾಚಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಜೋರು ಮಳೆಗೆ ಭೂಕುಸಿತದಿಂದಾಗಿ ವಿದ್ಯುತ್ ಕಂಬಗಳು, ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ಸಂಚಾರ ಸ್ಥಗಿತಗೊಂಡಿದೆ.
ತಾಳಬೆಟ್ಟ-ಪೊನ್ನಾಚಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಹತ್ತಾರು ಮರಗಳು ರಸ್ತೆಗೆ ಉರುಳಿ ಬಿದ್ದಿರುವುದರಿಂದ ವಾಹನ ಮತ್ತು ಜನ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿರುವುದರಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಸೆಸ್ಕ್ ಸಿಬ್ಬಂದಿ ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ತೋಟದ ಮನೆಗಳಿಗೆ ಜಲಬಂಧಿ :ಚಾಮರಾಜನಗರ ತಾಲೂಕಿನ ಅಯ್ಯನಪುರದ ದೊಡ್ಡಕೆರೆ ಸಮೀಪದ 15ಕ್ಕೂ ಹೆಚ್ಚು ತೋಟದ ಮನೆಗಳು, ರಸ್ತೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು, ರೈತರು ಸಂಚರಿಸಲು ಪ್ರಯಾಸ ಪಡುವಂತಾಗಿದೆ. ನಿರಂತರ ಮಳೆ ಜನರನ್ನು ಹೈರಣಾಗಿಸಿದೆ. ಇನ್ನು, ಅಯ್ಯನಪುರ ಗ್ರಾಮದ ಹಲವು ರೈತರ ಜಮೀನುಗಳಲ್ಲಿ ನೀರು ಉಕ್ಕುತ್ತಿದೆ. ಮೋಟರ್ ಚಾಲೂ ಮಾಡದೇ ಅಂತರ್ಜಲ ಚಿಮ್ಮುತ್ತಿರುವ ಪ್ರಸಂಗ ನಡೆಯುತ್ತಿದೆ.
ಕೊಳ್ಳೇಗಾಲದ ಇಂದಿರಾ ಕಾಲೋನಿಗೆ ಕಾಲುವೆ ನೀರು :ಸತತ ಮಳೆಗೆ ತುಂಬಿ ಹರಿದ ಕಾಲುವೆ ನೀರು ಕೊಳ್ಳೇಗಾಲದ ಇಂದಿರಾ ಕಾಲೋನಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನಗರಸಭೆ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಟನ್ ಕಾಲುವೆ ಕಾಮಗಾರಿಯು ನಾಲ್ಕು ವರ್ಷಗಳಿಂದಲೂ ಆಮೆಗತಿಯಲ್ಲಿ ನಡೆಯುತ್ತಿರುವ ಕಾರಣ, ಚಿಕ್ಕರಂಗನಾಥನ ಕೆರೆ ನೀರು ಸರ್ಕಟನ್ ಕಾಲುವೆ ಮೂಲಕ ಕೆರೆ ನೀರು ಮತ್ತು ಕೊಳಚೆ ನೀರು ಸರಾಗವಾಗಿ ಹರಿಯದ ಕಾರಣ ನಗರದ ಇಂದಿರಾ ಕಾಲೋನಿ ಜಲಾವೃತಗೊಂಡು, ಬದುಕನ್ನು ಅಸಹನೀಯವನ್ನಾಗಿಸಿದೆ.
ಮನೆ ತುಂಬೆಲ್ಲಾ ನೀರು ನಿಂತಿರುವುದನ್ನು ಕಂಡ ನಿವಾಸಿಗಳು ಕಣ್ಣೀರಿಡುತ್ತಿದ್ದಾರೆ. ಸ್ಥಳಕ್ಕೆ ಬಂದ ನಗರಸಭಾ ಸದಸ್ಯರುಗಳು, ಆಯುಕ್ತರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಲುವೆ ನೀರು ಕಾಲೋನಿಗೆ ಬರದಂತೆ ಮಣ್ಣಿನ ತಡೆಗೋಡೆ ಹಾಕಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.