ಚಾಮರಾಜನಗರ: ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಭಾರಿ (heavy rain in state) ಮಳೆಯಾಗುತ್ತಿದೆ. ಈ ತಿಂಗಳು ಸುರಿದ ದಾಖಲೆ ಮಳೆಗೆ ಜಿಲ್ಲೆಯಾದ್ಯಂತ ಅವಾಂತರ ಸೃಷ್ಟಿಯಾಗಿದೆ. ಬಹುಪಾಲು ಬೆಳೆ ನಾಶವಾಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ವರುಣನ ಆರ್ಭಟಕ್ಕೆ ಜಿಲ್ಲೆಯಲ್ಲಿ ಬರೋಬ್ಬರಿ 107 ಮನೆಗಳು ಹಾನಿಯಾಗಿ ಬಡವರ ಬದುಕು ಬೀದಿಗೆ ಬಿದ್ದಿದೆ.
107 ಮನೆಗಳಿಗೆ ಹಾನಿ:
ಪ್ರಕೃತಿ ವಿಕೋಪ ಶಾಖೆ ನೀಡಿರುವ ಮಾಹಿತಿ ಪ್ರಕಾರ, ನ.1ರಿಂದ14ರವರೆಗೆ ಹನೂರು ತಾಲೂಕಿನಲ್ಲಿ 46, ಯಳಂದೂರಿನಲ್ಲಿ 24, ಕೊಳ್ಳೇಗಾಲದಲ್ಲಿ 20, ಗುಂಡ್ಲುಪೇಟೆಯಲ್ಲಿ 9, ಚಾಮರಾಜನಗರದಲ್ಲಿ 8 ಮನೆಗಳ ಗೋಡೆಗಳು ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಭಾರಿ ಮಳೆಗೆ ನಲುಗಿದ ವಾಮರಾಜನಗರ ಜನತೆ ಜಿಲ್ಲೆಯಲ್ಲಿ ಮನೆಗಳ ಹಾನಿಯಿಂದಾಗಿ ಅಂದಾಜು 30,54,800 ರೂ. ನಷ್ಟವಾಗಿದೆ. ಹನೂರಿನಲ್ಲಿ 17,60,000 ರೂ., ಯಳಂದೂರಿನಲ್ಲಿ 1,24,800 ರೂ., ಕೊಳ್ಳೇಗಾಲದಲ್ಲಿ 7,90,000, ಗುಂಡ್ಲುಪೇಟೆಯಲ್ಲಿ 3,00,000, ಚಾಮರಾಜನಗರದಲ್ಲಿ 80,000 ರೂ. ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಅನ್ನದಾತರು ಕಂಗಾಲು:
ಜಿಲ್ಲೆಯಲ್ಲಿ ನವೆಂಬರ್ ತಿಂಗಳ 14 ದಿನಗಳಲ್ಲಿ 146 ಎಂಎಂ ಮಳೆಯಾಗಿದ್ದು, ಅತಿವೃಷ್ಠಿಯಿಂದ 1,500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಬೆಳೆಹಾನಿಯಾಗಿದೆ ಎಂದು ಕೃಷಿ ಇಲಾಖೆ ಜೆಡಿ ಚಂದ್ರಕಲಾ ತಿಳಿಸಿದ್ದಾರೆ. ಕಟಾವಿಗೆ ಬಂದಿದ್ದ ರಾಗಿ, ಮೆಕ್ಕೆಜೋಳ, ಕಡಲೆ ಸೇರಿದಂತೆ ಹತ್ತಾರು ಬೆಳೆಗಳು ನಾಶವಾಗಿದೆ. ಹಲವೆಡೆ ಮೇವಿಗೂ ಉಪಯೋಗಿಸಲಾರದ ಮಟ್ಟಿಗೆ ಫಸಲು ಕೈಕೊಟ್ಟಿದ್ದು ಸೂಕ್ತ ಪರಿಹಾರಕ್ಕೆ ರೈತರು ಒತ್ತಾಯಿಸಿದ್ದಾರೆ.
13 ಕೆರೆ ಭರ್ತಿ:
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ 64 ಕೆರೆಗಳಲ್ಲಿ 13 ಕೆರೆ ಭರ್ತಿಯಾಗಿದೆ. 11 ಕೆರೆಗಳು ಭರ್ತಿಯಾಗುವ ಹಂತದಲ್ಲಿದೆ. 31 ಕೆರೆಗಳಿಗೆ ಇನ್ನಷ್ಟೇ ನೀರು ಬರಬೇಕಿದೆ ಎಂದು ಎಇಇ ಶ್ಯಾಮಸುಂದರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶ: ಪರಿಹಾರಕ್ಕಾಗಿ ರೈತರ ಮನವಿ
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಷ್ಟೇ ಅಲ್ಲದೇ ಇನ್ನು ಹತ್ತಾರು ಕೆರೆಗಳು ಭರ್ತಿಯಾಗಿವೆ. ಗುಂಡ್ಲುಪೇಟೆ ತಾಲೂಕಿನ ಹಿರಿಕೆರೆ, ಯಳಂದೂರು ತಾಲೂಕಿನ ಹೊಂಗನೂರು ಕೆರೆ ಕೋಡಿ ಬಿದ್ದಿದೆ. ಚಾಮರಾಜನಗರ ತಾಲೂಕಿನ ಬೇಡರಪುರದ ವಡ್ಡರ ಕಟ್ಟೆ, ಮುದ್ದಯ್ಯನ ಕಟ್ಟೆ, ಅಯ್ಯನ ಕಟ್ಟೆ, ಶಿವಗಂಗೆ ಕೆರೆ ಒಂದೇ ದಿನಕ್ಕೆ ಭರ್ತಿಯಾಗಿ ಕೋಡಿ ಬಿದ್ದಿದೆ.