ಚಾಮರಾಜನಗರ: ಒಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಚಾಮರಾಜನಗರದ ಸ್ಥಿತಿ ಅಯೋಮಯವಾಗಿದೆ. ಎಲ್ಲಿ ನೋಡಿದರೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜಿಲ್ಲಾ ಕೇಂದ್ರವೂ ಸೇರಿದಂತೆ ಚಾಮರಾಜನಗರ ತಾಲೂಕು ಮಳೆಗೆ ತತ್ತರಿಸಿದೆ. ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ನೀರು ನುಗ್ಗಿದ್ದು ನಾಲ್ಕಡಿ ನೀರು ನಿಂತಿದೆ. ಇಂದಿರಾ ಕ್ಯಾಂಟೀನ್ಗೆ ಯಾರೂ ಕಾಲಿಡಲು ಸಾಧ್ಯವಿಲ್ಲ.
ನಗರದ ಸತ್ಯಮಂಗಲಂ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದಕ್ಕೆ ನದಿಯಂತೆ ನೀರು ಹರಿದಿದ್ದು ಮದುವೆ ಮನೆ ನೀರಿನ ಮನೆಯಾಗಿ ಬದಲಾಗಿದೆ. ಅಡುಗೆ ಕೋಣೆಯಲ್ಲಿದ್ದ ತರಕಾರಿಗಳು ತೇಲುತ್ತಿವೆ. ಮೊಣಕಾಲುದ್ದ ನೀರಿನಲ್ಲಿ ಬಾಣಸಿಗರು ಅಸಹಾಯಕರಾಗಿ ನಿಂತಿದ್ದು ಕಂಡುಬಂತು. ಇಲ್ಲಿ ಅಟ್ಟಗುಳಿಪುರ ಗ್ರಾಮದವರ ಮದುವೆಗೆ ಸಿದ್ಧತೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.