ಚಾಮರಾಜನಗರ :ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಕ್ಕ ಒಂದು ಗೆಲುವಿನಿಂದ ಸ್ಫೂರ್ತಿಗೊಂಡ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ನಿರಂತರ ಪ್ರಯತ್ನ, ತಯಾರಿ ಬಳಿಕ ಈಗ ವಿಶ್ವಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಚಾಮರಾಜನಗರ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಕೃಷ್ಣಪ್ಪ ಎಂಬುವರು 2022ರ ಜೂನ್ ವೇಳೆ ಜಪಾನ್ನಲ್ಲಿ ನಡೆಯುವ ವಿಶ್ವ ಮಟ್ಟದ ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, 45 ವರ್ಷ ಮೇಲ್ಪಟ್ಟವರ 400 ಮೀ., 800, 1,500 ಮೀಟರ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಕಳೆದ ಮಾರ್ಚ್ 13ರಂದು ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ವತಿಯಿಂದ ಆಯೋಜಿಸಿದ್ದ 2ನೇ ರಾಜ್ಯ ಮಟ್ಟದ ಮಾಸ್ಟರ್ ಕ್ರೀಡಾಕೂಟದಲ್ಲಿ 400, 800 ಹಾಗೂ 1,500 ಮೀಟರ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. ರಾಷ್ಟ್ರಮಟ್ಟದ ಕ್ರೀಡಾಕೂಡ ಕೊರೊನಾ ಕಾರಣಕ್ಕೆ ರದ್ದಾಗಿದ್ದರಿಂದ ಕಡಿಮೆ ಅವಧಿಯಲ್ಲಿ ಓಡಿದ ಇವರನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗಿದೆ.
ಕೃಷ್ಣಪ್ಪ ಅವರು 400 ಮೀ. ಓಟವನ್ನು 57 ಸೆಕೆಂಡ್ಗಳಲ್ಲಿ, 800 ಮೀ. ಓಟವನ್ನು 2.20 ನಿಮಿಷಗಳಲ್ಲಿ ಹಾಗೂ 1,500 ಮೀ. ಓಟವನ್ನು 4.49 ನಿಮಿಷಗಳಲ್ಲಿ ಓಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿರುವ ಇವರು ನಿತ್ಯ 6 ಕಿ.ಮೀ ಓಟದ ಅಭ್ಯಾಸ ನಡೆಸುತ್ತಿದ್ದಾರೆ.