ಚಾಮರಾಜನಗರ: ಗ್ರಾಮ ವಾಸ್ತವ್ಯದ ಮೂಲಕ ಜನಮನ ಸೆಳೆದಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಆದ್ರೆ 13 ವರ್ಷದ ಹಿಂದೆ ಸಿಎಂ ಆಗಿದ್ದಾಗ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದ ಈ ಗ್ರಾಮದಲ್ಲಿ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ವೇಳೆ ಸಿಎಂ ಕುಮಾರಸ್ವಾಮಿ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಗೆ ಬರುವ ಬಡಗಲಮೋಳೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ವಸತಿಹೀನ ಬಡವರಿಗೆ ನಿರ್ಮಿತಿ ಕೇಂದ್ರದ ಮೂಲಕ 89 ಮನೆಗಳನ್ನು ಕಟ್ಟಿಸಿ ಕೊಡಲಾಗಿತ್ತು. ಆಗ ರಸ್ತೆಗೆ, ಮನೆಗಳಿಗೆ ಬೀದಿದೀಪ ಕಲ್ಪಿಸಲು ಹೊಸದಾಗಿ 54 ವಿದ್ಯುತ್ ಕಂಬಗಳು ಎದ್ದು ನಿಂತವು. ಆದರೆ, ಆಗ ನಿರ್ಮಿಸಿದ್ದ ಮನೆಗಳ ಗೋಡೆಗಳು ಈಗ ಬಿರುಕುಬಿಟ್ಟಿವೆ. ಸಾಕಷ್ಟು ಸಮಸ್ಯೆಗಳನ್ನು ಹೊಂದಿರುವ ಗ್ರಾಮಕ್ಕೆ ಸಿಎಂ ಬಂದರೆ ಗ್ರಾಮ ಅಭಿವೃದ್ಧಿಯಾಗಲಿದೆ ಎಂದು ಗ್ರಾಮಸ್ಥೆ ನೀಲಸಿದ್ದಶೆಟ್ಟಿ ಆಶಾವಾದ ವ್ಯಕ್ತಪಡಿಸುತ್ತಿದ್ದಾರೆ.