ಚಾಮರಾಜನಗರ:ಹಣಕಾಸು ಸಚಿವ, ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಇಲ್ವಾ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು, ಸಿದ್ದರಾಮಯ್ಯಗೆ ಏನು ಕೆಲಸವಿಲ್ಲ, ಸಾಮಾನ್ಯ ವ್ಯಕ್ತಿಗೆ ಅರ್ಥವಾಗುವುದು ಅವರಿಗೆ ಅರ್ಥವಾಗಲ್ವ? ನಮ್ಮ ರಾಜ್ಯದಲ್ಲಿ ಮಾತ್ರ ಆರ್ಥಿಕ ಸಂಕಷ್ಟ ಇದೆಯಾ ಎಂದು ಆರ್ಥಿಕ ಸಂಕಷ್ಟದ ಕುರಿತು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಪಿಂಜರಾ ಪೌಲ್ ಸಚಿವರೆಲ್ಲ ಹಣಕಾಸು ಸಚಿವರಾದ್ರೆ ಇಷ್ಟೇ ಆಗುವುದು, ಪ್ರತಿಪಕ್ಷದವರು ಆಡಳಿತ ಪಕ್ಷಕ್ಕೆ ಸಹಕಾರ ಕೊಡಬೇಕು. ಕೊರೊನಾ ಇಷ್ಟು ಅಪಾಯಕಾರಿಯಾಗಿದೆ ಎಂದು ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ಸಮರ್ಥಿಸಿಕೊಂಡರು.
ಬುದ್ಧಿ ಕಲಿಯದ ಧ್ರುವ:
ದಿ. ಪಾಸ್ವಾನ್ ಅವರ ಖಾತೆ ತಮಗೆ ಸಿಗಲಿದೆಯಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿ, ನಾನು ಪಾಸ್ವಾನ್ ಸಮಕಾಲಿನ ವ್ಯಕ್ತಿ. ಆದರೆ, ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ, ಬಿಜೆಪಿ ವರಿಷ್ಠರ ತೀರ್ಮಾನದ ಬಗ್ಗೆ ನನಗೆ ಗೊತ್ತಿಲ್ಲ. ಧ್ರುವನಾರಾಯಣಗೆ ಪಾಠ ಕಲಿಸಬೇಕೆಂದು ವಿಶ್ರಾಂತಿಯಲ್ಲಿದ್ದ ನಾನು ಒತ್ತಾಯದಿಂದ ಚುನಾವಣೆಯಲ್ಲಿ ನಿಂತು ಗೆದ್ದೆ. ಜನರು ಆತನಿಗೆ ಬುದ್ಧಿ ಕಲಿಸಿದ್ದಾರೆ. ಆದರೆ, ಆತ ಇನ್ನು ಪಾಠ ಕಲಿತಿಲ್ಲ, ಇನ್ನು ಅವನು ಕಲಿಯಬೇಕೆಂದು ವ್ಯಂಗ್ಯ ಮಾಡಿದರು.
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುವ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸಪ್ರಸಾದ್, ಸಚಿವ ಸ್ಥಾನ ನೀಡದಿದ್ದರೆ ದೇಶವೇನೂ ಮುಳುಗುವುದಿಲ್ಲ, ನಾನು ಭವಿಷ್ಯವನ್ನು ಹೇಳುವುದಿಲ್ಲ. ಈಗಿರುವ ಕೊರೊನಾ ಸಂಕಷ್ಟವನ್ನು ನಿಭಾಯಿಸುವತ್ತ ಯೋಚಿಸಬೇಕಿದೆ ಎಂದರು.